ಬೆಂಗಳೂರು: ಬುಧವಾರ ಒಂದೇ ದಿನ ಆಸ್ತಿ ನೋಂದಣಿ ಸೇರಿದಂತೆ 26,058 ದಸ್ತಾವೇಜು ಪ್ರಕ್ರಿಯೆ ನಡೆದಿದ್ದು, 311 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಮುದ್ರಾಂಕ ಮತ್ತು ನೋಂದಣಿ ಇಲಾಖೆ ಇತಿಹಾಸದಲ್ಲೇ ಒಂದೇ ದಿನ ಇಷ್ಟು ದೊಡ್ಡ ಪ್ರಮಾಣದಲ್ಲಿ ಆಸ್ತಿ ನೋಂದಣಿ- ದಸ್ತಾವೇಜು ಪ್ರಕ್ರಿಯೆ ನಡೆದಿರುವುದು ಹಾಗೂ ಗರಿಷ್ಠ ಶುಲ್ಕ ಸಂಗ್ರಹ ವಾಗಿರುವುದು ಹೊಸ ದಾಖಲೆಯಾಗಿದೆ. ಕಳೆದ ಸೋಮವಾರವಷ್ಟೇ 15936 ನೋಂದಣಿ ದಸ್ತಾವೇಜು ಪ್ರಕ್ರಿಯೆ ನಡೆದಿದ್ದು 158.28 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಇದೀಗ ಎರಡೇ ದಿನದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚುತ್ತಲೇ ಇದ್ದು ಕಂದಾಯ-ನೋಂದಣಿ ಇಲಾಖೆ ಮತ್ತೊಂದು ಮೈಲುಗಲ್ಲು ಮುಟ್ಟಿದಂತಾಗಿದೆ.
ಕಳೆದ ಸೆಪ್ಟೆಂಬರ್ 22 ರಂದು 12,955 ಆಸ್ತಿ ನೋಂದಣಿ, ದಸ್ತಾವೇಜು ಪ್ರಕ್ರಿಯೆ ಮೂಲಕ 130.87 ಕೋಟಿ ರೂ. ಹಾಗೂ ಸೆ.25ರಂದು 158.28 ಕೋಟಿ ರೂ. ಹಣ ಸರಕಾರದ ಬೊಕ್ಕಸಕ್ಕೆ ಬಂದಿದೆ ಎಂಬುದು ಉಲ್ಲೇಖಾರ್ಹ.
ಕಾವೇರಿ-2 ತಂತ್ರಾಂಶದ ಫಲಿತಾಂಶ
ನೋಂದಣಿ ಸೇರಿದಂತೆ ಇತರೆ ಪ್ರಕ್ರಿಯೆಗಳಿಗೆ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಯಿಲ್ಲದೆ ಆಸ್ತಿದಾರರೇ ಬಯಸಿದ ದಿನ ಮತ್ತು ಸಮಯಕ್ಕೆ ಆಸ್ತಿ ನೋಂದಣಿ ಮಾಡಿಕೊಳ್ಳುವ, ಆನ್ಲೈನ್ನಲ್ಲೇ ಶುಲ್ಕ ಪಾವತಿ ವ್ಯವಸ್ಥೆಯಿರುವ ‘ಕಾವೇರಿ- 2’ ತಂತ್ರಾಂಶವು ಈಗಾಗಲೇ ಅಳವಡಿಕೆಯಾಗಿದೆ. ಇದೇ ಕಾರಣಕ್ಕೆ ಆಸ್ತಿ ನೋಂದಣಿ ಸಂಖ್ಯೆಯೂ ಹೆಚ್ಚುತ್ತಿದೆ.
ರಾಜ್ಯದ 256 ಉಪನೋಂದಣಿ ಕಚೇರಿಗಳಲ್ಲಿ ಜೂ.25ರಿಂದ ಪೂರ್ಣ ಪ್ರಮಾಣದಲ್ಲಿ ಸುಧಾರಿತ ತಂತ್ರಾಂಶ ದಡಿಯೇ ನೋಂದಣಿ, ದಸ್ತಾವೇಜು ಕಾರ್ಯ ನಡೆದಿವೆ. ಒಂದೇ ದಿನದಲ್ಲಿ ಗರಿಷ್ಠ ನೋಂದಣಿ, ದಸ್ತಾವೇಜು ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ತಂತ್ರಾಂಶವು ತನ್ನ ಗರಿಷ್ಠ ಕಾರ್ಯಕ್ರಮತೆಯನ್ನು ಸಾಬೀತುಪಡಿಸುತ್ತಿದೆ.
ಕಾವೇರಿ-2 ತಂತ್ರಾಂಶಕ್ಕೆ ಆರಂಭದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದರಲ್ಲಿರುವ ಸಮಸ್ಯೆಗಳ ಕುರಿತು ಸಾಕಷ್ಟು ದೂರುಗಳೂ ಇಲಾಖೆಗೆ ಬಂದಿದ್ದವು. ಇದೀಗ ಎಲ್ಲಾ ಸಮಸ್ಯೆಗಳನ್ನೂ ನಿವಾರಿಸಿದ್ದು, ಕಾವೇರಿ-2 ತಂತ್ರಾಂಶ ಸಾಕಷ್ಟು ಜನ ಮನ್ನಣೆ ಗಳಿಸಿದೆ.
ಇದರ ಸಹಾದಿಂದ ಮಧ್ಯವರ್ತಿಗಳ ಹಾವಳಿ ಇಲ್ಲದೇ ಶೀಘ್ರ ಮತ್ತು ಪಾರದರ್ಶಕವಾಗಿ ನೋಂದಣಿ ಪ್ರಕ್ರಿಯೆಗಳು ಮುಗಿಯುತ್ತಿವೆ. ಈ ಮೂಲಕ ಸರ್ಕಾರಕ್ಕೂ ಆದಾಯ ಹೆಚ್ಚುತ್ತಿದ್ದು, ಜನರಿಗೂ ಸರಳ ಸುಲಭ ಸೇವೆಯ ಜೊತೆಗೆ ಸಮಯವೂ ಉಳಿಯುತ್ತಿದೆ.