ಬೆಂಗಳೂರು: ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧನಾಗಿದ್ದು, ಯಾವಾಗ ಸಚಿವ ಸ್ಥಾನ ಬಿಟ್ಟುಕೊಡಿ ಎಂದಾಗ ನಾನು ಬಿಟ್ಟುಕೊಡಲು ಸಿದ್ದನಿದ್ದೇನೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿ ಸ್ಥಾನಕ್ಕೆ ಅನೇಕ ಶಾಸಕರು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಎಲ್ಲರೂ ಮಂತ್ರಿಯಾಗಬೇಕು ಎಂದು ಆಸೆ ಪಡೋದರಲ್ಲಿ ತಪ್ಪೇನಿಲ್ಲ, ಆದರೆ ಈ ವಿಷಯವನ್ನು ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ತಿಳಿಸಿದರು.
ಮಹಾರಾಷ್ಟ್ರ ಕರ್ನಾಟಕ ಗಡಿಯಲ್ಲಿ ಆತಂಕ

ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲು ಹೋರಾಟದಿಂದಾಗಿ ಅಲ್ಲಿ ನಡೆಯುತ್ತಿರುವ ಗಲಭೆಯಿಂದ ಗಡಿಯಲ್ಲಿ ಆತಂಕ ವಿಚಾರವಿರುವ ಹಿನ್ನೆಲೆಯಲ್ಲಿ ಗಡಿಯಲ್ಲಿ ಭದ್ರತೆ ಹೆಚ್ಚಳ ಮಾಡಲಾಗಿದೆ. ಎಲ್ಲೆಲ್ಲಿ ಸೂಕ್ಷ್ಮ ವಾತಾವರಣ ಇದೆಯೋ ಅಲ್ಲಿ ಕೆಎಸ್ಆರ್ ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ ಎಂದರು.
ಬೆಳಗಾವಿಯಲ್ಲಿ ಎಂಇಎಸ್ ಕೂಡ ಕರಾಳ ದಿನ ಅಂತ ಮಾಡಲು ಮುಂದಾದರೆ ಅದನ್ನು ತಡೆಯುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಸತೀಶ್ ಜಾರಕಿಜೊಳಿ ಬಣದಿಂದ ದುಬೈ ಪ್ರವಾಸ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ಯಾರೆಲ್ಲ ಹೋಗ್ತಾರೆ ಅಂತ ಗೊತ್ತಿಲ್ಲ, ನೋಡೋಣ, ಯಾಕೆ ಹೋಗ್ತಿದ್ದಾರೆ ಗೊತ್ತಿಲ್ಲ, ಸುತ್ತಾಡೋಕ್ಕೆ ಹೋಗ್ತಿದ್ದಾರೋ ಏನೋ ಎಂದು ಹೇಳಿದ ಅವರು, ಅಲ್ಲಿ ನಮ್ಮ ಕನ್ನಡ ಸಂಘಗಳಿವೆ, ಅವರೇನಾದರೂ ಕರೆದಿದ್ದಾರಾ ಇಲ್ವಾ ಅಂತ ನೋಡಬೇಕು ಎಂದರು.
ಕಾಂಗ್ರೆಸ್ ಪಕ್ಷದ ಮೇಲೆ ಬಿಜೆಪಿ ಮುಖಂಡರಿಗೆ ಆಸಕ್ತಿ
ಪ್ರತಿಯೊಬ್ಬ ಬಿಜೆಪಿ ನಾಯಕರೂ ನಮ್ಮ ಬಗ್ಗೆ ಮಾತ್ರ ಮಾತನಾಡುತ್ತಾರೆ, ಅವರ ಪಕ್ಷದ ವಿಚಾರವಾಗಿ ಹೆಚ್ಚು ತಲೆಕೆಡಿಸಿಕೊಳ್ಳಲ್ಲ, ಅವರಿಗೆ ನಮ್ಮ ಪಕ್ಷದ ಮೇಲೆ ಹೆಚ್ಚು ಆಸಕ್ತಿ ಇದ್ದಂತೆ ಇದೆ, ಅವರೆಲ್ಲ ನಮ್ಮ ಪಕ್ಷಕ್ಕೆ ಬರ್ತಾರೇನೋ? ಅದಕ್ಕಾಗಿ ನಮ್ಮ ಪಕ್ಷದ ಬಗ್ಗೆ ಹೆಚ್ಚು ಚರ್ಚೆ ನಡೆಸ್ತಿದ್ದಾರೇನೋ? ಎಂದು ತಿಳಿಸಿದರು.