Kannada Comprehensive Language Development: ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕ ಶೀಘ್ರ ಜಾರಿ: ಸಚಿವ ಶಿವರಾಜ್ ತಂಗಡಗಿ

ಬೆಂಗಳೂರು, ಅ.31 ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕ ೨೦೨೨ನ್ನು ಜಾರಿ ಗೊಳಿಸಲು ವಿಧೇಯಕಕ್ಕೆ ಅಗತ್ಯವಾದ ನಿಯಮಗಳನ್ನು ರೂಪಿಸುವ ಪ್ರಕ್ರಿಯೆ ಜಾರಿಯಲ್ಲಿದೆ, ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಒಂದು ಉಪ ಸಮಿತಿಯನ್ನು ರಚಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು‌.

ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ವಿಧೇಯಕ ಈಗಾಗಲೇ ಎರಡು ಸದನಗಳಲ್ಲೂ ಅಂಗೀಕರಗೊಂಡಿದೆ. ವಿಧೇಯಕ ಜಾರಿಗೆ ನಿಯಮಗಳನ್ನು ರೂಪಿಸಲಾಗುತ್ತಿದ್ದು, ಈ ಸಂಬಂಧ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಅವರ ನೇತೃತ್ವದ ಉಪ ಸಮಿತಿ ಮೂರು ಬಾರಿ ಸಭೆ ಕೂಡ ನಡೆಸಿದೆ.‌
ಈ ಹಿನ್ನೆಲೆಯಲ್ಲಿ ಗೃಹ ಇಲಾಖೆ ಸೇರಿದಂತೆ ಕೆಲ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ. ನಿಯಮ ರೂಪಿಸುವಿಕೆ ಅಂತಿಮ ಹಂತದಲ್ಲಿದೆ,ಅದು ಪೂರ್ಣಗೊಂಡ ಕೂಡಲೇ ಶೀಘ್ರವೇ ವಿಧೇಯಕ ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದರು.

ಕಠಿಣ ಕ್ರಮದ ಎಚ್ಚರಿಕೆ:
ಎಂಇಎಸ್ ಸಂಘಟನೆ ಕರಾಳ ದಿನಾಚರಣೆ ಮಾಡಿದರೆ ಅದಕ್ಕೆ ಕಠಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಚಿವ ಶಿವರಾಜ್ ತಂಗಡಿ ಅವರು ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮದವರ‌ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು,
ನಾನು ಸರಳ ಭಾಷೆಯಲ್ಲಿ ಎಂಇಎಸ್ ಸಂಘಟನೆ ಅವರಿಗೆ ಹೇಳುತ್ತೇನೆ. ನಮ್ಮ ನೆಲ, ಜಲ, ಇಲ್ಲಿನ ಗಾಳಿ ಪಡೆದು ಇದೀಗ ಈ ರೀತಿ ವರ್ತಿಸುವುದು ಸರಿಯಲ್ಲ. ಇದನ್ನೇ ಮುಂದುವರೆಸಿದರೆ ಸರ್ಕಾರ ಸುಮ್ಮನಿರುವುದಿಲ್ಲ ಎಂದು ತೀಕ್ಷ್ಣವಾಗಿ ಹೇಳಿದರು.

ನೀವುಗಳು ಎಲ್ಲಿ ಇರುತ್ತೀರಾ ಅಲ್ಲಿನ ಭಾಷೆ ಗೌರವಿಸುವ ಕೆಲಸ ಮಾಡಬೇಕು. ಇಲ್ಲಿನ ಎಲ್ಲ ಸವಲತ್ತು ಪಡೆದು, ಇಂತಹ ವರ್ತನೆ ತೋರುವುದು ಸರಿಯಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

More News

You cannot copy content of this page