ಬೆಂಗಳೂರು: ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಕಾರ್ಯಕರ್ತರ ಜಯಕಾರ ನಡುವೆ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಶಾಸಕ ಬಿ.ವೈ.ವಿಜಯೇಂದ್ರ ಅವರು ಅಧಿಕಾರ ಸ್ವೀಕರಿಸಿದರು.
ನಿರ್ಗಮಿತ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ನಿರ್ಗಮಿತ ಅಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮುಖಂಡರುಗಳಾದ ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ್, ಹಿರಿಯ ನಾಯಕ ರಾಮಚಂದ್ರ ಗೌಡ ಭಾಗವಹಿಸಿದ್ದರು.

ಬಿಜೆಪಿಯಲ್ಲಿ ಪ್ರಮುಖ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದ ಅಸಮಾಧಾನಿತರು ಎಂದು ಗುರುತಿಸಿಕೊಂಡಿರುವ ವಿ ಸೋಮಣ್ಣ, ಬಸವನಗೌಡ ಪಾಟೀಲ್ ಯತ್ನಾಳ್, ಸಿ ಟಿ ರವಿ, ಅರವಿಂದ್ ಬೆಲ್ಲದ್ ಸೇರಿದಂತೆ ಅನೇಕ ನಾಯಕರ ಗೈರು ಹಾಜರಿ ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತಿತ್ತು.
ರಾಜ್ಯ ಕಾರ್ಯಾಲಯಕ್ಕೆ ಆಗಮಿಸಿದ ವಿಜಯೇಂದ್ರ ಮತ್ತು ಪಕ್ಷದ ಇತರ ಪ್ರಮುಖರಿಗೆ ಸುಮಂಗಲಿಯರು ಪೂರ್ಣಕುಂಭ ಕಲಶಗಳೊಂದಿಗೆ ಸ್ವಾಗತ ಕೋರಿದರು. ಬ್ಯಾಂಡ್, ಯಕ್ಷಗಾನದ ವೇಷಗಳು, ಗೊಂಬೆಗಳ ಮೂಲಕ ಅದ್ಧೂರಿ ಸ್ವಾಗತ ಕೋರಲಾಯಿತು.

ಸದಾನಂದಗೌಡ : ಸೋಲಿನ ನಂತರ ಹೊಸ ಸಾರಥಿ ಆಯ್ಕೆ ಆಗಿದೆ, ಕಳೆದುಕೊಂಡಿದ್ದನ್ನ ಅದೇ ಜಾಗದಲ್ಲೇ ಪಡೆದುಕೊಳ್ಳಬೇಕು, ಲೋಕಸಭೆ ಚುನಾವಣೆಯಲ್ಲಿ ಅದನ್ನ ನಾವು ಪಡೆದುಕೊಳ್ಳಬೇಕು, ಎಲ್ಲರನ್ನ ಒಟ್ಟಿಗೆ ಕರೆದೊಯ್ಯುವ ಜವಾಬ್ದಾರಿ ನೂತನ ಅಧ್ಯಕ್ಷರ ಮೇಲಿದೆ ಎಂದು ಸಂಸದ ಸದಾನಂದ ಗೌಡ ತಿಳಿಸಿದರು.
ಬಸವರಾಜ ಬೊಮ್ಮಾಯಿ : ಸೂಕ್ತ ಸಮಯದಲ್ಲಿ ವಿಜಯೇಂದ್ರ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ, ಪ್ರಧಾನಿ ಮೋದಿ, ಅಮಿತ್ ಶಾ, ಜೆ ಪಿ ನಡ್ಡಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಜಯೇಂದ್ರಗೆ ಸಂಪೂರ್ಣ ಯಶಸ್ಸು ಸಿಗಲಿ ಎಂದು ಹಾರೈಸಿದ ಅವರು, ವಿಧಾನ ಸಭೆ ಚುನಾವಣೆ ಬಳಿಕ ಬಿಜೆಪಿಗೆ ದೊಡ್ಡ ಶಕ್ತಿ, ಉತ್ಸಾಹ ಬಂದಿದೆ ಎಂದರು.
ಕೆ ಎಸ್ ಈಶ್ವರಪ್ಪ: ವಿಜಯೇಂದ್ರ ಅಧ್ಯಕ್ಷರಾದಾಗ ರಾಜ್ಯ ಆಶ್ಚರ್ಯಪಟ್ಟಿತ್ತು, ಅದೇ ರೀತಿ 28 ಲೋಕಸಭೆ ಕ್ಷೇತ್ರ ಗೆದ್ದು ರಾಜ್ಯವೇ ಆಶ್ಚರ್ಯಪಡುವಂತಾಗಬೇಕು, ಅಲ್ಲೊಂದು ಇಲ್ಲೊಂದು ಸಮಸ್ಯೆ ಇದೆ, ಅದನ್ನ ಜೀರ್ಣ ಮಾಡಿಕೊಳ್ಳಬೇಕು ಎಂದು ಕರೆನೀಡಿದರು.