ಮುಂಬೈ: ಏಕದಿನ ಕ್ರಿಕೆಟ್ ವಿಶ್ವಕಪ್-2023 ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಟೀಂ ಇಂಡಿಯಾದ “ಚೇಸ್ ಮಾಸ್ಟರ್” ವಿರಾಟ್ ಕೊಹ್ಲಿ ಹಾಗೂ “ಹಿಟ್‌ಮ್ಯಾನ್” ರೋಹಿತ್ ಶರ್ಮಾ ಹೊಸ ದಾಖಲೆ ಬರೆಯುವ ಮೂಲಕ ಕ್ರಿಕೆಟ್ ಲೋಕದ ಅಧಿಪತಿಗಳಾಗಿ ಮಿಂಚಿದ್ದಾರೆ.
ಮುಂಬೈನ ಐತಿಹಾಸಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರೋಹಿತ್ ಶರ್ಮಾ, ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ನೀಡಿದರು. ಇನ್ನಿಂಗ್ಸ್ ಆರಂಭದಿಂದಲೇ ಸ್ಪೋಟಕ ಆಟಕ್ಕೆ ಮೊರೆ ಹೋದ ರೋಹಿತ್ ಶರ್ಮ(47 ರನ್, 29 ಬಾಲ್, 4 ಬೌಂಡರಿ, 4 ಸಿಕ್ಸ್) ಮೂಲಕ ಅಬ್ಬರಿಸಿದರು. ಅಲ್ಲದೇ ಈ ಪ್ರದರ್ಶನದ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಬರೆದರು. ಕಿವೀಸ್ ವಿರುದ್ಧ 4 ಭರ್ಜರಿ ಸಿಕ್ಸರ್ ಸಿಡಿಸಿದ ಹಿಟ್‌ಮ್ಯಾನ್, ಆ ಮೂಲಕ ವಿಶ್ವಕಪ್‌ನಲ್ಲಿ ಒಟ್ಟಾರೆ 51 ಸಿಕ್ಸರ್ ಬಾರಿಸಿ, ಕ್ರಿಸ್ ಗೇಯ್ಲ್(49 ಸಿಕ್ಸ್) ದಾಖಲೆ ಮುರಿದರು.

ಕಿಂಗ್ ಕೊಹ್ಲಿ 50ನೇ ಶತಕ:
ನ್ಯೂಜಿ಼ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ವಿರಾಟ್ ಕೊಹ್ಲಿ(117) ಕೂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಇನ್ನಿಂಗ್ಸ್ ಆರಂಭದಿಂದಲೇ ಜವಾಬ್ದಾರಿಯ ಆಟವಾಡಿದ ಕಿಂಗ್ ಕೊಹ್ಲಿ,(117 ರನ್, 113 ಬಾಲ್, 9 ಬೌಂಡರಿ, 2 ಸಿಕ್ಸ್) ಕಿವೀಸ್ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದರು. ಅಲ್ಲದೇ ಈ ಶತಕದ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 50ನೇ ಶತಕ ಸಿಡಿಸಿದ ಚೇಸ್ ಮಾಸ್ಟರ್, ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್(49 ಶತಕಗಳು) ಅವರ ಹೆಸರಿನಲ್ಲಿದ್ದ ದಾಖಲೆಯನ್ನ ಬ್ರೇಕ್ ಮಾಡುವ ಮೂಲಕ ವಿಶ್ವದಾಖಲೆ ಸೃಷ್ಟಿಸಿದರು.