ಬೆಳಗಾವಿ ಸುವರ್ಣಸೌಧ: ಬಾರ್ ಸನ್ನದು (ಲೈಸೆನ್ಸ್ )ಗಳ ನೀಡಿಕೆಯಲ್ಲಿ ಮೀಸಲಾತಿ ಅನುಷ್ಠಾನ ವಿಚಾರ ಸರಕಾರದ ಗಮನದಲ್ಲಿದ್ದು, ಕಾನೂನು ತಂದು ಅನುಷ್ಠಾನಗೊಳಿಸುವುದಕ್ಕೆ ಕ್ರಮವಹಿಸಲಾಗುವುದು ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.

ಮಂಗಳವಾರ ಸದನದಲ್ಲಿ ಬಾರ್‌ಲೈಸೆನ್ಸ್ ನೀಡಿಕೆಗೆ ಸಂಬಂಧಿಸಿದಂತೆ ಕಾವೇರಿದ ಚರ್ಚೆ ನಡೆಯಿತು.
ಈ ವೇಳೆ ಸಿಎಲ್-7 ಸನ್ನದುಗಳ ನೀಡಿಕೆಯಲ್ಲಿ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಮನಸ್ಸಿಗೆ ಬಂದಂತೆ ನೀಡಲಾಗುತ್ತಿದೆ ಎಂಬ ಸದಸ್ಯರ ಆರೋಪಗಳಿಗೆ ಉತ್ತರಿಸಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು, ನಿಯಮಗಳ ಅನುಸಾರವೇ ಸಿಎಲ್-7 ಬಾರ್ ಲೈಸೆನ್ಸ್ ನೀಡಲಾಗಿದೆ.

ಸಿಎಲ್-7 ಸನ್ನದುಗಳ ನೀಡಿಕೆಯಲ್ಲಿ ಈಗಿರುವ ನಿಯಮಗಳಲ್ಲಿ ಲಾಡ್ಜಿಂಗ್ ವಿನ್ಯಾಸ ಎಷ್ಟಿರಬೇಕು ಮತ್ತು ಪಾರ್ಕಿಂಗ್ ಹೇಗಿರಬೇಕು ಎಂಬುದರ ಬಗ್ಗೆ ಯಾವುದೇ ಅಂಶಗಳಿಲ್ಲ. ಅದನ್ನು ಮುಂದಿನ ದಿನಗಳಲ್ಲಿ ಸೇರ್ಪಡೆಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಕೋಲಾರ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 56 ಸಿಎಲ್-7 ಸನ್ನದುಗಳನ್ನು ಮಂಜೂರು ಮಾಡಲಾಗಿದೆ. ಕೋಲಾರ ಜಿಲ್ಲೆಯ ಅಬಕಾರಿ ಅಧೀಕ್ಷಕ ರಂಗಪ್ಪ ಅವರ ಮೇಲಿನ ಆರೋಪಗಳ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳಿಂದ ವಿಚಾರಣೆ ನಡೆಸಿ ವರದಿ ತರಿಸಿಕೊಳ್ಳಲಾಗುವುದು. ವರದಿ ಆಧರಿಸಿ ಶೀಘ್ರವೇ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.