CABLE CAR PROJECT: ನಂದಿಬೆಟ್ಟ, ಅಂಜನಾದ್ರಿ, ಗಗನಚುಕ್ಕಿಯಲ್ಲಿ ಕೇಬಲ್ ಕಾರ್ ಯೋಜನೆಗೆ ಪರಿಶೀಲನೆ: ಸಚಿವ ಹೆಚ್. ಕೆ. ಪಾಟೀಲ್

Pಸುವರ್ಣಸೌಧ ಬೆಳಗಾವಿ: ಯಲ್ಲಮ್ಮನಗುಡ್ಡ, ಮಧುಗಿರಿ, ಅಂಜನಾದ್ರಿ, ನಂದಿಬೆಟ್ಟ ಹಾಗೂ ಗಗನ ಚುಕ್ಕಿಯಲ್ಲಿ ಕೇಬಲ್ ಕಾರ್ ಪ್ರಾರಂಭಿಸುವುದಕ್ಕೆ ಪರಿಶೀಲನೆ ಕಾರ್ಯ ನಡೆಸಲಾಗುತ್ತಿದೆ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್. ಕೆ. ಪಾಟೀಲ್ ತಿಳಿಸಿದರು.

ಬೆಳಗಾವಿಯ ಸುವರ್ಣ ಸೌಧದಲ್ಲಿ ಮಂಗಳವಾರ ವಿಧಾನಸಭಾ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವ ಹೆಚ್.ಕೆ.ಪಾಟೀಲ್, ಯಲ್ಲಮ್ಮನಗುಡ್ಡ, ಮಧುಗಿರಿ, ಅಂಜನಾದ್ರಿ, ನಂದಿಬೆಟ್ಟ ಹಾಗೂ ಗಗನ ಚುಕ್ಕಿಯಲ್ಲಿ ಕೇಬಲ್ ಕಾರ್ ಪ್ರಾರಂಭಿಸುವುದಕ್ಕೆ ಪರಿಶೀಲನೆ ಕಾರ್ಯ ನಡೆಸಲಾಗುತ್ತಿದೆ ಎಂದರು.
2023-24ನೇ ಸಾಲಿನ ಆಯವ್ಯಯದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸರ್ಕಾರದಿಂದ 339.54 ರೂ. ಕೋಟಿ ಮೀಸಲಿರಿಸಲಾಗಿದೆ. ಈ ಪೈಕಿ 90 ಕೋಟಿ ರೂ. ಬಂಡವಾಳ ವೆಚ್ಚಗಳ ಲೆಕ್ಕಶೀರ್ಷಿಕೆಗಳಡಿ ಈಗಾಗಲೇ ಒದಗಿಸಲಾಗಿದೆ ಎಂದರು.

ಇದೇ ವೇಳೆ ಶಾಸಕರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿರುವ 25 ಸಾವಿರಕ್ಕೂ ಹೆಚ್ಚಿನ ಸ್ಮಾರಕಗಳ ರಕ್ಷಣೆ ನಿಟ್ಟಿನಲ್ಲಿ
ಸರ್ಕಾರ ಕ್ರಮ ವಹಿಸಿದೆ. ಅಲ್ಲದೇ ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದರು. ಸ್ಮಾರಕಗಳ ದತ್ತು ತೆಗೆದುಕೊಳ್ಳುವ ಯೋಜನೆ ಜಾರಿಯಲ್ಲಿದೆ. ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಪ್ರವಾಸೋದ್ಯಮ ನೀತಿ 2020-26ರ ಅಡಿ ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಸಾಹಸ, ಕೃಷಿ, ಮನರಂಜನಾ, ಕ್ಯಾರವಾನ್, ಸಾಂಸ್ಕೃತಿಕ ಪ್ರವಾಸೋದ್ಯಮ, ಸಾಂಸ್ಕೃತಿಕ ಗ್ರಾಮ, ಪರಿಸರ, ಪಾರಂಪರಿಕ, ಹೋಂ ಸ್ಟೇ, ಹೋಟೆಲ್, ಹೌಸ್ ಬೋಟ್, ವಸ್ತು ಸಂಗ್ರಹಾಲಯ, ಗ್ಯಾಲರಿ, ರೋಪ್ ವೇ, ಧ್ವನಿ ಮತ್ತು ಬೆಳಕು, ಥೀಪ್ ಪಾರ್ಕ್ ಸೇರಿದಂತೆ 26 ರೀತಿಯ ಪ್ರವಾಸಿ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸಲು ಮುಂದೆ ಬರುವ ಖಾಸಗಿ ಬಂಡವಾಳ ಹೂಡಿಕೆದಾರರನ್ನು ಸೆಳೆಯಲು ಸಹಾಯಧನ ಪ್ರೋತ್ಸಾಹಕಗಳು ಮತ್ತು ರಿಯಾಯಿತಿಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, 2012-13 ರಲ್ಲಿ ಮೂಡುಬಿದರೆ ಕ್ಷೇತ್ರದ ಸಸಿಹಿತ್ಲು ಕಡಲ ತೀರದಲ್ಲಿ ಅಂತರಾಷ್ಟ್ರೀಯ ಸರ್ಫಿಂಗ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಸರ್ಫಿಂಗ್ ನಂತಹ ಸಾಹಸ ಕ್ರೀಡೆಯ ಉತ್ತೇಜನಕ್ಕೆ ಸರ್ಕಾರ ಮುಂದಾಗಬೇಕು. ಹಾಗೇ ಸಸಿಹಿತ್ಲು ಪ್ರದೇಶದಲ್ಲಿನ ಕುಡಿಯುವ ನೀರು ಹಾಗೂ ಬೀದಿ ದೀಪ ಅಳವಡಿಸುವ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.

ಜೈನ ಕಾಶಿ ಮೂಡಬಿದರೆಯ ಯಾತ್ರಿ ನಿವಾಸಕ್ಕೆ 15 ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ 70 ಲಕ್ಷ ರೂ. ಮಂಜೂರಾಗಿದ್ದು, ಸರ್ಕಾರದಿಂದ 52.50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಸಹ ಪೂರ್ಣಗೊಂಡಿದೆ. ಸಸಿಹಿತ್ಲು ಅಭಿವೃದ್ದಿ ಕಾಮಗಾರಿಗೆ 25 ಲಕ್ಷ ರೂ. ಮೀಸಲಿರಿಸಿದ್ದು, ಆದ್ಯತೆಯ ಮೇರೆಗೆ ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವ ಹೆಚ್.ಕೆ.ಪಾಟೀಲ್ ಪ್ರಶ್ನೆಗೆ ಉತ್ತರಿಸಿದರು.

ಮೂಡಬಿದರೆ ಕ್ಷೇತ್ರದ ಕಲಕಕೆರೆ ನಿಸರ್ಗಧಾಮ ಮತ್ತು ರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮಕ್ಕೆ 1 ಕೋಟಿ ರೂ., ಶಿರ್ತಾಡಿ ಗ್ರಾಮದ ಪ್ರವಾಸಿ ತಾಣ ಕೊಣಜಿಕಲ್ಲು ಗುಡ್ಡ ಅಭಿವೃದ್ಧಿಗೆ 50 ಲಕ್ಷ ರೂ. ಹಾಗೂ ಮೂಡಬಿದರೆ ಸಾವಿರ ಕಂಬದ ಬಸದಿ ಹಾಗೂ ಇತರೆ ಜೈನ ಮಂದಿರಗಳ ಅಭಿವೃದ್ದಿಗೆ 50 ಲಕ್ಷ ರೂ. ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ ಎಂದು ಮಾಹಿತಿ ನೀಡಿದರು.
ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಕಲೇಶಪುರ ತಾಲ್ಲೂಕಿನ ಮರಗುಂದ, ಮಂಜರಾಬಾದ್ ಕೋಟೆ, ಮೂಕನಮನೆ ಜಲಪಾತ, ಅಬ್ಬಿ ಜಲಪಾತ, ಬಿಸಿಲೆ ಘಾಟ್, ಪಾಂಡವರ ಬೆಟ್ಟ, ಮೂರ್ಕಣ್ ಬೆಟ್ಟ, ಜೇನುಕಲ್ಲು ಬೆಟ್ಟ, ಗುಡ್ಡ ಬಸವಣ್ಣ, ಪಾಟ್ಲೆಬೆಟ್ಟ ಪ್ರದೇಶಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಗುರುತಿಸಲಾಗಿದೆ ಎಂದರು.

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಜಲ ಸಾಹಸ ಕ್ರೀಡಗಳನ್ನು ಕಲಿಯಲು ರಾಜ್ಯದಿಂದ ಹೊರ ರಾಷ್ಟ್ರಗಳಿಗೆ ಅನೇಕರು ತೆರಳುತ್ತಾರೆ. ರಾಜ್ಯದಲ್ಲಿ ಸುಮಾರು 300 ಕಿ.ಮೀ ಉದ್ದದ ಕರಾವಳಿ ತೀರವಿದೆ. ಇಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಜಲ ಸಾಹಸ ಕ್ರೀಡೆಗಳ ಪ್ರವಾಸೋದ್ಯಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಕೋರಿದರು.

ರಾಜ್ಯದ ಕರಾವಳಿ ಜಿಲ್ಲೆಗಳು ಕಡಲು ಕಿನಾರೆ, ಧಾರ್ಮಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ನಾಡಿಗೆ ಹೆಸರಾಗಿವೆ. ಈ ಮೂರು ಅಂಶಗಳನ್ನು ಮುಂದಿಟ್ಟುಕೊಂಡು, ಕರಾವಳಿ ಅಭಿವೃದ್ದಿ ಮಂಡಳಿಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಯೋಜನೆ ರೂಪಿಸುವಂತೆ ಸಭಾಧ್ಯಕ್ಷ ಯು.ಟಿ.ಖಾದರ್ ಸರ್ಕಾರಕ್ಕೆ ಇದೇ ವೇಳೆ ಸೂಚನೆ ನೀಡಿದರು.

More News

You cannot copy content of this page