ಹಾಸನ : ಅರ್ಜುನನನ್ನು ನನ್ನ ಜತೆ ಕಳುಹಿಸಿಕೊಡಿ, ನನ್ನ ಆನೆಯನ್ನು ಬದುಕಿಸಿಕೊಡಿ, ಮನೆಯಲ್ಲಿ ಹೆಂಡತಿ, ಮಕ್ಕಳು ಅಳುತ್ತಿದ್ದಾರೆ, ನಾನು ಎಂಥ ರಾಜನನ್ನು ಕಳೆದುಕೊಂಡೆ ಇದು ಅರ್ಜುನನ ಮಾವುತ ವಿನುವಿನ ಕಣ್ಣೀರು ಹಾಕುವಾಗ ಹೇಳಿದ ಮಾತುಗಳು.

ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ನೆರೆದಿದ್ದ ನೂರಾರು ಜನರ ಕಣ್ಣಲ್ಲಿ ಕಣ್ಣೀರು ತರಿಸಿತ್ತು. ಆ ಆನೆಯ ಮೇಲೆ ಅಷ್ಟೊಂದು ಪ್ರೀತಿ ಮತ್ತು ವಿಶ್ವಾಸವನ್ನು ಅದರ ಮಾವುತ ವಿನು ಇಟ್ಟುಕೊಂಡಿದ್ದ. ಹಾಸನದ ಸಕಲೇಶಪುರದ ದಬ್ಬಳಿಕಟ್ಟೆ ಸಮೀಪದ ಕೆಎಫ್ ಡಿಸಿ ಅರಣ್ಯದಲ್ಲಿ ಅರ್ಜುನನ ಕಳೇಬರವನ್ನು ತಬ್ಬಿಕೊಂಡು ಮಾವುತ ವಿನು ಆಡುತ್ತಿದ್ದ ಮಾತುಗಳು.

ಪದೇ ಪದೇ ಅರ್ಜುನನ ಬಳಿ ತೆರಳಿ ನನ್ನೊಂದಿಗೆ ಬಂದು ಬಿಡು ಎಂದು ಕೋರುತ್ತಿದ್ದುದು ಅಲ್ಲಿ ನೆರೆದಿದ್ದವರ ಮನಕಲಕುವಂತಿತ್ತು. ವಿನುವಿನ ದುಖ ನೋಡಿ ಅಲ್ಲಿದ್ದ ಅಧಿಕಾರಿಗಳ ಕಣ್ಣಾಲೆಗಳು ಕೂಡ ತೇವಗೊಂಡಿದ್ದವು.
ನಿನ್ನೆ ಕಾಡಾನೆ ಜೊತೆಗಿನ ಕಾಳಗದಲ್ಲಿ ಅರ್ಜುನ ಮೃತಪಟ್ಟಿದ್ದ. ಆ ಆನೆಯ ಅಂತ್ಯಸಂಸ್ಕಾರಕ್ಕೆ ಅಗತ್ಯ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗುತ್ತಿತ್ತು. ಜನರು ಬಂದು ಅರ್ಜುನನ ಅಂತಿಮ ದರ್ಶನ ಪಡೆಯುತ್ತಿದ್ದರು.

ಮೈಸೂರು ರಾಜಮನೆತನದ ಪೂರೋಹಿತ ಪ್ರಹ್ಲಾದ್ ಅವರಿಂದ ಸಕಲ ವಿಧಿ ವಿಧಾನದೊಂದಿಗೆ ಅರ್ಜುನನ ಅಂತ್ಯ.ಕ್ರಿಯೆ ನೇರವೇರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದಲೇ ನಮ್ಮ ಸಾಂಸ್ಕೃತಿಕ ರಾಯಭಾರಿ ಅರ್ಜುನ ಮೃತಪಟ್ಟಿದ್ದಾನೆ, ತಪ್ಪಿತಸ್ಥ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದರು.