Team India: ಆಟಗಾರರಿಗೆ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯುವ ತವಕ

ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿರುವ ಟೀಂ ಇಂಡಿಯಾದ ಯುವ ಆಟಗಾರರು 2024ರಲ್ಲಿ ನಡೆಯುವ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಮೂಡಿಸಿದ್ದಾರೆ.

ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಐದು ಪಂದ್ಯಗಳ ಟಿ20 ಸರಣಿಗೆ ಕಿರಿಯ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಈ ಅವಕಾಶದ ಸಂಪೂರ್ಣ ಲಾಭ ಪಡೆದ ಯುವ ಆಟಗಾರರು ಭಾರತಕ್ಕೆ ಸರಣಿ ಗೆದ್ದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಪ್ರಮುಖವಾಗಿ ಆರಂಭಿಕ ಬ್ಯಾಟರ್‌ಗಳಾದ ಋತುರಾಜ್‌ ಗಾಯಕ್ವಾಡ್‌, ಯಶಸ್ವಿ ಜೈಸ್ವಾಲ್‌ ಜೊತೆಗೆ ರಿಂಕು ಸಿಂಗ್‌ ಕೂಡ ತಮ್ಮ ಅದ್ಭುತ ಬ್ಯಾಟಿಂಗ್‌ನಿಂದ ಮಿಂಚಿದರೆ. ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯಿ ಕೂಡ ಗಮನಾರ್ಹ ಪ್ರದರ್ಶನ ನೀಡಿದರು.
ತಮ್ಮ ಶ್ರೇಷ್ಠ ಪ್ರದರ್ಶನದಿಂದಾಗಿ ಈ ಆಟಗಾರರು ಇದೀಗ 2024ರಲ್ಲಿ ನಡೆಯುವ ಟಿ20 ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾ ಪರ ಆಡುವ ನಿರೀಕ್ಷೆ ಹೊಂದಿದ್ದಾರೆ.

ಆಸೀಸ್‌ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ನೀಡಿದ ಉತ್ತಮ ಪ್ರದರ್ಶನದಿಂದಾಗಿ ಈಗಾಗಲೇ ಸೌತ್‌ ಆಫ್ರಿಕಾ ಪ್ರವಾಸಕ್ಕೂ ಆಟಗಾರರನ್ನ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಹೀಗಾಗಿ ತವರಿನ ಬಳಿಕ ವಿದೇಶಿ ನೆಲದಲ್ಲೂ ಈ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಿದ್ದೇ ಆದಲ್ಲಿ, ಬಹುತೇಕ ವಿಶ್ವಕಪ್‌ ತಂಡದಲ್ಲೂ ತಮ್ಮ ಸ್ಥಾನವನ್ನ ಖಚಿತಪಡಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿದೆ.

ಐದು ಪಂದ್ಯಗಳ ಟಿ20 ಸರಣಿಯಲ್ಲಿ ಋತುರಾಜ್‌ ಗಾಯಕ್ವಾಡ್‌, 55.75ರ ಸರಾಸರಿಯಲ್ಲಿ 223 ರನ್‌ಗಳಿಸಿದರೆ. ಯಶಸ್ವಿ ಜೈಸ್ವಾಲ್‌ 138 ಹಾಗೂ ರಿಂಕು ಸಿಂಗ್‌ 105 ರನ್‌ಗಳಿಸಿದರು. ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯಿ 5 ಪಂದ್ಯಗಳಲ್ಲಿ 18.22ರ ಸರಾಸರಿಯಲ್ಲಿ 9 ವಿಕೆಟ್‌ ಪಡೆದು ಮಿಂಚಿದರು. ಅಲ್ಲದೇ ಸರಣಿ ಶ್ರೇಷ್ಠ ಪ್ರಶಸ್ತಿಯನ್ನ ಸಹ ತಮ್ಮದಾಗಿಸಿಕೊಂಡರು.

More News

You cannot copy content of this page