ದುಬೈ: ಆಸ್ಟ್ರೇಲಿಯಾ ತಂಡದ ಸ್ಟಾರ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂ. ಮೊತ್ತಕ್ಕೆ ಖರೀದಿಯಾಗುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಖರೀದಿಯಾದ ಆಟಗಾರ ಎನಿಸಿಕೊಂಡಿದ್ದಾರೆ.
ದುಬೈನಲ್ಲಿ ನಡೆದ 2024ರ ಮಿನಿ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಆಸೀಸ್ ಆಟಗಾರನ ಖರೀದಿಗಾಗಿ ಗುಜರಾತ್ ಟೈಟನ್ಸ್(ಜಿಟಿ) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಆದರೆ ಅಂತಿಮವಾಗಿ 24.75 ಕೋಟಿ ರೂ. ಮೊತ್ತಕ್ಕೆ ಮಿಚೆಲ್ ಸ್ಟಾರ್ಕ್ ಅವರನ್ನು ಖರೀದಿಸುವಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಯಶಸ್ವಿಯಾಯಿತು. ಅಲ್ಲದೇ ಈ ಮೊತ್ತಕ್ಕೆ ಖರೀದಿಯಾಗುವ ಮೂಲಕ ಮಿಚೆಲ್ ಸ್ಟಾರ್ಕ್, ಐಪಿಎಲ್ ಇತಿಹಾಸದಲ್ಲಿ ದುಬಾರಿ ಮೊತ್ತ ಪಡೆದ ಆಟಗಾರ ಎಂಬ ಹೆಗ್ಗಳಿಕೆ ಪಡೆದರು.

ಇದಕ್ಕೂ ಮುನ್ನ ಸನ್ ರೈಸರ್ಸ್ ಹೈದರಾಬಾದ್, ಆಸ್ಟ್ರೇಲಿಯಾ ತಂಡದ ಮತ್ತೋರ್ವ ಆಟಗಾರ ಪ್ಯಾಟ್ ಕಮ್ಮಿನ್ಸ್, ಅವರನ್ನ 20.50 ಕೋಟಿ ರೂ. ಕೊಟ್ಟು ಖರೀದಿಸಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಮೊತ್ತಕ್ಕೆ ಸೇಲ್ ಆದ ಆಟಗಾರ ಎಂಬ ಹೆಗ್ಗಳಿಕೆಗೆ ಪ್ಯಾಟ್ ಕಮಿನ್ಸ್ ಪಾತ್ರರಾಗಿದ್ದರು. ನಂತರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಇದೀಗ ಆಸ್ಟ್ರೇಲಿಯಾ ಬೌಲರ್ ಮಿಚೆಲ್ ಸ್ಟಾರ್ಕ್ 24 ಕೋಟಿ ರೂ.ಗೆ ಕೊಲ್ಕತ್ತಾ ನೈಟ್ ರೈಡರ್ಸ್ ಪಾಲಾಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಖರೀದಿಯಾದ ಆಟಗಾರನಾಗಿದ್ದಾರೆ.

ಇನ್ನು ವಿಂಡೀಸ್ ವೇಗಿ ಅಲ್ಜಾರಿ ಜೋಸೆಫ್ (1 ಕೋಟಿ ಮೂಲಬೆಲೆ) ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೇಂಟ್ಸ್, ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಂದೆಬಂತು. ಇವರು ಅಂತಿಮವಾಗಿ 11.50 ಕೋಟಿಗೆ ಆರ್ಸಿಬಿ ಪಾಲಾದರು. 2 ಕೋಟಿ ಮೂಲಬೆಲೆಯ ಉಮೇಶ್ ಯಾದವ್ ಖರೀದಿಗೆ ಗುಜರಾತ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಹೈದರಾಬಾದ್ ಮುಂದೆಬಂತು. ಅಂತಿಮವಾಗಿ ಯಾದವ್ 5.80 ಕೋಟಿಗೆ ಗುಜರಾತ್ ಪಾಲಾದರು.

50 ಲಕ್ಷ ಮೂಲಬೆಲೆ ಹೊಂದಿದ್ದ ಶಿವಂ ಮಾವಿ ಖರೀದಿಗೆ ಲಕ್ನೋ ಸೂಪರ್ ಜೇಂಟ್ಸ್ ಮತ್ತು ಆರ್ಸಿಬಿ ನಡುವೆ ಕಠಿಣ ಪೈಪೋಟಿ ನಡೆಯಿತು. ಅಂತಿಮವಾಗಿ ಇವರು ಅಚ್ಚರಿ ಎಂಬಂತೆ 6.40 ಕೋಟಿಗೆ ಲಕ್ನೋ ಫ್ರಾಂಚೈಸಿ ಪಾಲಾಗಿದ್ದಾರೆ. ದಕ್ಷಿಣ ಆಫ್ರಿಕಾದ ಜೆರಾಲ್ಡ್ ಕೋಟ್ಝಿ ಅವರಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಪೈಪೋಟಿ ನಡೆಸಿದರು, ಇವರು 5 ಕೋಟಿಗೆ ಮುಂಬೈ ಪಾಲಾಗಿದ್ದಾರೆ. ಆರ್ಸಿಬಿ ಮಾಜಿ ಆಟಗಾರ ಹರ್ಷಲ್ ಪಟೇಲ್ ಖರೀದಿಗೆ ಗುಜರಾತ್, ಲಕ್ನೋ ಮತ್ತು ಪಂಜಾಬ್ ಮುಂದೆ ಬಂತು. ಕಠಿಣ ಪೈಪೋಟಿಯ ನಡುವೆ ಇವರು ಅಂತಿಮವಾಗಿ ಬರೋಬ್ಬರಿ 11.75 ಕೋಟಿಗೆ ಪಂಜಾಬ್ ಪಾಲಾಗಿದ್ದಾರೆ.

1 ಕೋಟಿ ಮೂಲಬೆಲೆಯೊಂದಿಗೆ ಕಾಣಿಸಿಕೊಂಡ ನ್ಯೂಝಿಲೆಂಡ್ ಆಲ್ರೌಂಡರ್ ಡೇರಿಲ್ ಮಿಚೆಲ್ ಖರೀದಿಗೆ ಡೆಲ್ಲಿ, ಚೆನ್ನೈ ಮತ್ತು ಪಂಜಾಬ್ ನಡುವೆ ಕಾಳಗ ನಡೆಯಿತು. ಕೊನೆಯಲ್ಲಿ ಇವರು 14 ಕೋಟಿಗೆ ಚೆನ್ನೈ ಪಾಲಾಗಿದ್ದಾರೆ. ಈ ಬಾರಿಯ ವಿಶ್ವಕಪ್ ನಲ್ಲಿ ಮಿಂಚಿದ್ದ ನ್ಯೂಜಿಲೆಂಡ್ ತಂಡದ ಯುವ ಆಲ್ ರೌಂಡರ್ ರಚಿನ್ ರವೀಂದ್ರ ಕೇವಲ 1 ಕೋಟಿ 80 ಲಕ್ಷ ರೂ. ಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಾರಾಟವಾಗಿದ್ದಾರೆ. ಟೀಮ್ ಇಂಡಿಯಾ ಆಲ್ರೌಂಡರ್ ಶಾರ್ದೂಲ್ ಥಾಕೂರ್ (2 ಕೋಟಿ ಮೂಲಬೆಲೆ) ಖರೀದಿಗೆ ಸಿಎಸ್ ಕೆ ಮತ್ತು ಹೈದರಾಬಾದ್ ನಡುವೆ ಪೈಪೋಟಿ ಏರ್ಪಟಿತು. ಇವರು 4 ಕೋಟಿಗೆ ಚೆನ್ನೈ ಪಾಲಾಗಿದ್ದಾರೆ.