ಹಾಲಿವುಡ್ ಸಿನಿಮಾ ‘ಫಾಸ್ಟ್ ಅಂಡ್ ಫ್ಯೂರಿಯಸ್’ ಸರಣಿಗಳ ಖ್ಯಾತ ನಟ ವಿನ್ ಡೀಸಲ್ (56) ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಎಷ್ಟೇ ವಿರೋಧಿಸಿದರೂ ಒತ್ತಾಯಪೂರ್ವಕವಾಗಿ ನಟ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ದೂರಿ ನಟನ ಮಾಜಿ ಸಹಾಯಕಿ ಅಸ್ಟಾ ಜಾನ್ಸನ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಘಟನೆ ನಡೆದು 13 ವರ್ಷಗಳ ಬಳಿಕ ದೂರು ನೀಡಿರುವ ನಟನ ಸಹಾಯಕಿ ಅಸ್ಟಾ, 2010ರಲ್ಲಿ ‘ಫಾಸ್ಟ್ ಅಂಡ್ ಫ್ಯೂರಿಯಸ್ 5’ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಐಷಾರಾಮಿ ಹೋಟಲ್ ವೊಂದರಲ್ಲಿ ತಂಗಿದ್ದ ನಟ ನನ್ನನ್ನು ರೂಂಗೆ ಬರುವಂತೆ ಸೂಚಿಸಿದರು. ಕೆಲಸದ ನಿಮಿತ್ತ ಹೋದಾಗ ವಿನ್ ಡೀಸೆಲ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಮಾಜಿ ಸಹಾಯಕಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಹಾಲಿವುಡ್ ನಟ ವಿನ್ ಡೀಸೆಲ್ ವಕೀಲ, ” ವಿನ್ ಡಿಸೇಲ್ ಈ ಆರೋಪವನ್ನು ತಳ್ಳಿಹಾಕಿದ್ದಾರೆ. 9 ದಿನ ಕೆಲಸ ಮಾಡಿದ ಉದ್ಯೋಗಿಯ 13 ವರ್ಷಗಳ ಹಿಂದಿನ ಆರೋಪವನ್ನು ಇದೇ ಮೊದಲ ಬಾರಿಗೆ ಕೇಳುತ್ತಿದ್ದಾರೆ. ಈ ವಿಲಕ್ಷಣ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸುವಂತಹ ಸ್ಪಷ್ಟ ಪುರಾವೆ ನಮ್ಮಲ್ಲಿದೆ.” ಎಂದು ತಿಳಿಸಿದ್ದಾರೆ.