Electrocution Death: ವಿದ್ಯುತ್ ಆಘಾತ, ಸಾವಿನ ಘಟನೆಗಳಿಗೆ ಸಚಿವರೇ ನೇರ ಹೊಣೆಗಾರರು: ಸುನೀಲ್‍ಕುಮಾರ್

ಬೆಂಗಳೂರು: ಬೆಂಗಳೂರಿನಲ್ಲಿ ಪದೇಪದೇ ವಿದ್ಯುತ್ ಅವಘಡಗಳು ನಡೆದು ಜನರು ಸಾವನ್ನಪ್ಪುತ್ತಿದ್ದು, ಇದಕ್ಕೆ ವಿದ್ಯುತ್ ಇಲಾಖೆ ಸಚಿವರೇ ಹೊಣೆಗಾರರು. ಇಂಥ ದುರ್ಘಟನೆಗಳು ಪದೇಪದೇ ನಡೆಯುತ್ತಿರುವುದು ಖಂಡನೀಯ. ಇದೊಂದು ಅತ್ಯಂತ ಬೇಜವಾಬ್ದಾರಿ ಸರಕಾರ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸುನೀಲ್‍ಕುಮಾರ್ ಅವರು ಆರೋಪಿಸಿದ್ದಾರೆ.
ವರ್ತೂರಿನಲ್ಲಿ ನಿನ್ನೆ ಬಾಲಕಿಯೊಬ್ಬಳು ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾಳೆ. ವಿದ್ಯುತ್ ಪೂರೈಕೆ, ವಿದ್ಯುತ್ ಕಂಬಗಳ ನಿರ್ವಹಣೆಯ ವಿಚಾರದಲ್ಲಿ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬ ಆರೋಪಗಳಿವೆ. ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕೂಡಲೇ ಸ್ಥಳೀಯರು ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಆಕೆ ಮೃತ ಪಟ್ಟಿದ್ದಾಳೆ. ಇದೇ ಅಪಾರ್ಟ್‍ಮೆಂಟಿನಲ್ಲಿ ಮೂರು ತಿಂಗಳ ಹಿಂದೆ ಬಾಲಕಿಗೆ ಕರೆಂಟ್ ಶಾಕ್ ಹೊಡೆದಿತ್ತು; ಆದರೆ, ಆಕೆ ಅದೃಷ್ಟವಶಾತ್ ಬಚಾವಾಗಿದ್ದರು. ಘಟನಾ ಸ್ಥಳದಲ್ಲಿ ನಿನ್ನೆವೆರೆಗೂ ಇದ್ದ ಸಿಸಿಟಿವಿ ವ್ಯವಸ್ಥೆಯನ್ನ ಈಗ ತೆಗೆದಿದ್ದಾರೆ ಎಂಬ ಮಾಹಿತಿಯೂ ಲಭಿಸಿದೆ ಎಂದು ವಿವರಿಸಿದ್ದಾರೆ.
ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಪಾದಚಾರಿ ಮಾರ್ಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ವಿದ್ಯುತ್ ಪ್ರವಹಿಸಿ ತಾಯಿ ಮತ್ತು ಒಂಬತ್ತು ತಿಂಗಳ ಮಗು ಮೃತಪಟ್ಟಿದ್ದರು. ಈ ಆಘಾತಕಾರಿ ಘಟನೆಯ ಕಹಿನೆನಪು ಮಾಸುವ ಮುನ್ನವೇ ಇನ್ನೊಂದು ದುರ್ಘಟನೆ ಸಂಭವಿಸಿದೆ. ವಿದ್ಯುತ್ ಸಚಿವರು ಇದಕ್ಕೆ ನೇರ ಹೊಣೆಗಾರರು ಎಂದು ತಿಳಿಸಿದ್ದಾರೆ. ಈ ವಿಚಾರದಲ್ಲಿ ಸರಕಾರವು ಯಾವುದೇ ವರದಿ ನೀಡಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

More News

You cannot copy content of this page