ಚಿತ್ರದುರ್ಗ: ಒಂದಲ್ಲಾ ಎರಡಲ್ಲ ಬರೋಬ್ಬರಿ ಐದು ಅಸ್ಥಿಪಂಜರ
ಚಿತ್ರದುರ್ಗದ ಪಾಳು ಬಿದ್ದ ಮನೆಯಲ್ಲಿ ಪತ್ತೆಯಾಗಿದ್ದು, ಕೋಟೆ ನಗರಿ ಜನ ಬೆಚ್ಚಿ ಬಿದ್ದಿದ್ದಾರೆ.
ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ನಗರದ ಚಳ್ಳಕೆರೆ ಗೇಟ್ ಬಳಿ ಇರುವ ಜೈಲ್ ರಸ್ತೆಯ ಮನೆಯಲ್ಲಿ ಅಸ್ಥಿಪಂಜರಗಳು ಪತ್ತೆಯಾಗಿದ್ದು, ದುರ್ವಾಸನೆ ಬಂದ ಕಾರಣ ಅಕ್ಕಪಕ್ಕದ ನಿವಾಸಿಗಳು ಬಡಾವಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಮನೆ ನೋಡಲು ಬಂದ ಪೊಲೀಸರಿಗೆ ಮೊದಲ ಬೆಡ್ ರೂಂ ನಲ್ಲಿ ಮೂರು, ಪಕ್ಕದ ಬೆಡ್ ರೂಂ ನಲ್ಲಿ ಎರಡು ಅಸ್ಥಿಪಂಜರ ಒಟ್ಟು ಐದು ಅಸ್ಥಿಪಂಜರ ಪತ್ತೆಯಾಗಿದೆ.

ಇಂಜಿನಿಯರ್ ಆಗಿದ್ದ ಜಗನ್ನಾಥ ರೆಡ್ಡಿ ದೊಡ್ಡ ಸಿದ್ದವ್ವನಹಳ್ಳಿ ಎಂಬ ಹೆಸರಿರುವ ಈ ಪಾಳು ಬಿದ್ದ ಮನೆಯಲ್ಲಿ ಈ ಹಿಂದೆ ಜಗನ್ನಾಥರೆಡ್ಡಿ ಮತ್ತು ಅವರ ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರ ಕೃಷ್ಣಾರೆಡ್ಡಿ, ನರೇಂದ್ರರೆಡ್ಡಿ ವಾಸವಾಗಿದ್ದರು ಎಂದು ಸ್ಥಳೀಯ ನಿವಾಸಿ, ದೂರು ದಾರ ಪವನ್ ಕುಮಾರ್ ತಿಳಿದಿದ್ದಾರೆ.

ದೂರುದಾರರ ಪ್ರಕಾರ, ಸುಮಾರು ವರ್ಷಗಳಿಂದ ಜಗನ್ನಾಥರೆಡ್ಡಿ ಕುಟುಂಬ ತಮ್ಮ ಸಂಪರ್ಕದಲ್ಲಿರಲಿಲ್ಲ. ನಮ್ಮ ಮನೆಗೆ ಬರುತ್ತಿರಲಿಲ್ಲ, ಅವರ ಮನೆಗೆ ನಾವು ಹೋಗುತ್ತಿರಲಿಲ್ಲ. ಕೆಲ ವರ್ಷಗಳಿಂದ ಜಗನ್ನಾಥರೆಡ್ಡಿ ಮತ್ತು ಕುಟುಂಬದವರು ಕಂಡಿಲ್ಲ.ಜಗನ್ನಾಥರೆಡ್ಡಿ ಮನೆಯಲ್ಲಿ ಪತ್ತೆ ಆಗಿರುವುದು ಅವರವೇ ಅಸ್ಥಿಪಂಜರ ಆಗಿರಬಹುದು. 3 ವರ್ಷದ ಹಿಂದೆಯೇ ಮನೆಯಲ್ಲಿ ಮೃತಪಟ್ಟಿರಬಹುದು ಎಂದು ತಿಳಿಸಿದ್ದಾರೆ.

ಪರಿಶೀಲನೆ ನಡೆಸಿದ ಪೊಲೀಸರಿಗೆ ಆ ಮನೆಯಲ್ಲಿ ಕಳೆದ ನವೆಂಬರ್ 2022 ರಿಂದ ಯಾರೂ ಇರಲಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇನ್ನು ಮೃತರ ಸಾವಿನ ಬಗ್ಗೆ ಅನುಮಾನ ಇರುವ ಹಿನ್ನಲೆ ವೈದ್ಯಕೀಯ ಪರೀಕ್ಷೆಗೊಳಪಡಿಸಿ ಕಾನೂನು ಕ್ರಮ ಕೈಗೊಳ್ಳಲು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಡಿವೈಎಸ್ಪಿ ಅನಿಲ್ ಕುಮಾರ್, ಸಿಪಿಐ ನಹಿಂ ಅಹಮದ್, ಪಿಎಸ್ಐ ರಘು ಸೇರಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.