ಬೆಂಗಳೂರು : ಬೆಂಗಳೂರಿನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಲಿಫ್ಟ್ ಕೈಕೊಟ್ಟ ಪರಿಣಾಮ, ಸಂಸದರು ಸೇರಿದಂತೆ ಮೂವರು ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಲಿಫ್ಟ್ ನೊಳಗೆ ಸಿಲುಕಿಕೊಂಡಿರುವ ಘಟನೆ ಇಂದು ನಡೆದಿದೆ.
ಬಿಜೆಪಿ ಕಚೇರಿ ಸಿಬ್ಬಂದಿ ಅವರು ಕಳೆದ ಅರ್ಧ ಗಂಟೆಯಿಂದ ಕೆಟ್ಟು ನಿಂತ ಲಿಫ್ಟ್ ಸರಿಪಡಿಸಲು ಸಾಧ್ಯವಾಗದೇ, ಹತಾಶಗೊಂಡಿದ್ದರು. ಕಚೇರಿಯಲ್ಲಿ ವಿದ್ಯುತ್ ಹೋದಾಗ ಲಿಫ್ಟ್ ಕೆಟ್ಟು ನಿಂತಿತ್ತು. ಸುಮಾರು ಅರ್ಧ ಗಂಟೆಯಿಂದ ಲಿಫ್ಟ್ ಸರಿಪಡಿಸಲು ಕಸರತ್ತು ಮಾಡಲಾಗಿತ್ತು.
ವಿದ್ಯುತ್ ಮತ್ತೆ ಬಂದರೂ ಕೆಲಸ ಮಾಡದ ಲಿಫ್ಟ್, ಲಿಫ್ಟ್ ಟೆಕ್ನಿಷಿಯನ್ ಮೂಲಕ ಸಿಕ್ಕಿಕೊಂಡ ಮೂವರ ರಕ್ಷಣೆಗೆ ಕಸರತ್ತು ನಡೆಸಲಾಯಿತು. ಲಿಫ್ಟ್ ನಲ್ಲಿ ಯಾರು ಸಿಲುಕಿದ್ದಾರೆ ಎನ್ನುವುದು ಮಾತ್ರ ನಿಗೂಢವಾಗಿತ್ತು.

ಕೊನೆಗೆ ಹರಸಾಹಸ ಮಾಡಿ ಲಿಫ್ಟ್ ನ ಬಾಗಿಲನ್ನು ತೆರೆದಾಗ ಲಿಫ್ಟ್ ನಲ್ಲಿ ಸಂಸದ ಉಮೇಶ್ ಜಾಧವ್ ಸಿಲುಕಿಕೊಂಡಿದ್ದರು. ಕೊನೆಗೂ ಹರಸಾಹಸಪಟ್ಟು ಜಾಧವ್ ಸೇರಿದಂತೆ ಮೂವರನ್ನು ಹೊರ ಕರೆದುಕೊಂಡು ಬಂದ ಸಿಬ್ಬಂದಿ, ನೆಟ್ಟಿಸಿರು ಬಿಟ್ಟರು.
ಸುಮಾರು ಅರ್ಧ ಗಂಟೆ ಕಸರತ್ತಿನ ನಂತರ ಸಂಸದರ ರಕ್ಷಣೆ ಮಾಡಿದ ಟೆಕ್ನಿಷಿಯನ್ ಮತ್ತು ಬಿಜೆಪಿ ಕಚೇರಿ ಸಿಬ್ಬಂದಿಗಳಿಗೆ ಸುರಕ್ಷಿತವಾಗಿ ಲಿಫ್ಟ್ ನಿಂದ ಹೊರ ಬಂದ ಉಮೇಶ್ ಜಾಧವ್, ಕೈಕುಲುಕಿ ಕೃತಜ್ಞತೆ ಸಲ್ಲಿಸಿದರು.