ಬೆಳಗಾವಿ: ಇಲ್ಲಿನ ಕೋಟೆ ಕೆರೆ ಉದ್ಯಾನದಲ್ಲಿ ಮಾತನಾಡುತ್ತ ಕುಳಿತಿದ್ದ ಯುವಕ– ಯುವತಿಯನ್ನು ಎಳೆದೊಯ್ದ ಏಳು ಆರೋಪಿಗಳ ತಂಡ, ಮನಸೋ ಇಚ್ಚೆ ಹಲ್ಲೆ ನಡೆಸಿದ ಘಟನೆ ಶನಿವಾರ ಸಂಜೆ ನಡೆದಿದೆ.
ಬೆಳಗಾವಿ ತಾಲ್ಲೂಕಿನ ಯಮನಾಪುರ ಗ್ರಾಮದ ಸಚಿನ್ ಲಮಾನಿ (22) ಹಾಗೂ ಮುಸ್ಕಾನ್ ಪಟೇಲ್ (23) ಹಲ್ಲೆಗೆ ಒಳಗಾದವರು. ಈ ಇಬ್ಬರೂ ಪರಿಚಯಸ್ಥರಾಗಿದ್ದಾರೆ.
ಯುವನಿಧಿಗೆ ಅರ್ಜಿ ಸಲ್ಲಿಸಲು ಬೆಳಗಾವಿಗೆ ಬಂದಿದ್ದರು. ಕೇಂದ್ರದಲ್ಲಿ ಸರ್ವರ್ ಸಮಸ್ಯೆ ಉಂಟಾಗಿ ಕೆಲಸ ಸ್ಥಗಿತಗೊಂಡಿತು. ಸಮಯ ಕಳೆಯಲು ಇಬ್ಬರೂ ಇಲ್ಲಿನ ಕೋಟೆ ಕೆರೆಯ ಉದ್ಯಾನದಲ್ಲಿ ಬಂದು ಮಾತನಾಡುತ್ತ ಕುಳಿತಿದ್ದರು.
‘ಇಳಿಸಂಜೆಗೆ ನಮ್ಮತ್ತ ಧಾವಿಸಿದ ಆರೋಪಿಗಳು ಏಕಾಏಕಿ ಹಲ್ಲೆ ಮಾಡಿದರು. ನೀವು ಯಾರು, ಏನು ಸಂಬಂಧ ಎಂದೆಲ್ಲ ಪ್ರಶ್ನೆ ಮಾಡಿ ಅವರನ್ನು ಎಳೆದುಕೊಂಡು ಹತ್ತಿರದ ರೂಮಿಗೆ ಕರೆದೊಯ್ದರು. ಮೂರು ತಾಸು ರೂಮಿನಲ್ಲಿ ಕೂಡಿಹಾಕಿ, ಮನಸೋ ಇಚ್ಚೆ ಥಳಿಸಿದರು’ ಎಂದು ಗಾಯಗೊಂಡ ಯುವಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಯುವಕ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದರು. ಅವರನ್ನು ಕೂಡಿ ಹಾಕಿದ ಲೊಕೇಷನ್ ಪತ್ತೆ ಮಾಡಿದ ನಗರ ಪೊಲೀಸರು ಇಬ್ಬರನ್ನೂ ರಕ್ಷಿಸಿದರು.
‘ಘಟನೆ ಸಂಬಂಧ ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಯುವಕ– ಯುವತಿಗೆ ಹೆಚ್ಚಿನ ಅನಾಹುತ ಆಗದಂತೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಯಾರೇ ಕಾನೂನು ಕೈಗೆತ್ತಿಕೊಂಡರೂ ಸಹಿಸುವುದಿಲ್ಲ. ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಎಸ್.ಎನ್.ಸಿದ್ರಾಮಪ್ಪ ಮಾಹಿತಿ ನೀಡಿದರು.
ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.