Naresh Goyal: ಬದುಕಿನ ಎಲ್ಲ ಭರವಸೆಯನ್ನೂ ಕಳೆದುಕೊಂಡಿದ್ದೇನೆ. ನನ್ನನ್ನು ಸಾಯಲು ಬಿಡಿ: ಗಳಗಳನೇ ಕಣ್ಣೀರಿಟ್ಟ ಜೆಟ್‌ ಏರ್‌ವೇಸ್‌ ಸಂಸ್ಥಾಪಕ ಗೋಯಲ್‌

ಬೆಂಗಳೂರು: ಜೀವನದ ಪ್ರತಿಯೊಂದು ಭರವಸೆಯನ್ನು ಕಳೆದುಕೊಂಡಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ಜೀವಂತವಾಗಿರುವುದಕ್ಕಿಂತ ಸಾಯುವುದು ಉತ್ತಮ. ನನ್ನನ್ನು ಜೈಲಿನಲ್ಲೇ ಸಾಯಲು ಬಿಡಿ ಎಂದು ನ್ಯಾಯಾಲಯದ ಎದುರು ಕೈ ಕಟ್ಟಿ ನಿಂತು ಕಣ್ಣೀರಾಕುತ್ತಾ
ಮಾತನಾಡಿದ್ದಾರೆ.

ಕೆನರಾ ಬ್ಯಾಂಕ್‌ನಲ್ಲಿ 538 ಕೋಟಿ ವಂಚನೆ ಮಾಡಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಕಳೆದ ವರ್ಷ ಸೆಪ್ಟೆಂಬರ್ 1 ರಂದು ಗೋಯಲ್ ಅವರನ್ನು ಬಂಧಿಸಿತ್ತು.
ಆರ್ಥರ್ ರೋಡ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ ರನ್ನ ನ್ಯಾಯಾಲಯಕ್ಕೆ ಕರೆತಂದಾಗ ಗಳಗಳ ಕಣ್ಣೀರು ಹಾಕಿದ್ದಾರೆ.

ಜಡ್ಜ್‌ ಮುಂದೆ ಕೈಕಟ್ಟಿ ಅಳುತ್ತಾ ಮಾತಾಡಿದ ಅವ್ರು, ಪತ್ನಿ ಅನಿತಾಳನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆಕೆ ಕ್ಯಾನ್ಸರ್‌ನ ಮುಂದುವರಿದ ಹಂತದಲ್ಲಿದ್ದಾಳೆ.‌ ಸದ್ಯ ಆಕೆ ಹಾಸಿಗೆ ಹಿಡಿದಿದ್ದು, ಇತ್ತ ಇರುವ ಒಬ್ಬಳೇ ಮಗಳು ಕೂಡ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಅವಳನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಅಲ್ಲದೇ ತಮ್ಮ ಮೊಣಕಾಲುಗಳನ್ನು ತೋರಿಸುತ್ತಾ. ಅವು ಊದಿಕೊಂಡಿವೆ ಮತ್ತು ನೋವಿನಿಂದ ಕೂಡಿದೆ. ಕಾಲುಗಳನ್ನು ಮಡಚಲು ಸಾಧ್ಯವಾಗುತ್ತಿಲ್ಲ. ಮೂತ್ರ ವಿಸರ್ಜಿಸುವಾಗ ತೀವ್ರವಾದ ನೋವು ಮತ್ತು ಕೆಲವೊಮ್ಮೆ ಮೂತ್ರದ ಮೂಲಕ ರಕ್ತವು ಬರುತ್ತದೆ. ಆರೋಗ್ಯ ತಾಪಸಣೆಗಾಗಿ ನನ್ನನ್ನು ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಆದರೆ ಆಸ್ಪತ್ರೆಗೆ ಹೋಗಿ ಹೆಚ್ಚು ಹೊತ್ತು ಸರದಿಯಲಿ ನಿಲ್ಲಲು ಆಗುತ್ತಿಲ್ಲ. ಅಷ್ಟೊಂದು ಶಕ್ತಿ ನನಗಿಲ್ಲ. ಹೀಗಾಗಿ ಪದೇ ಪದೇ ಆಸ್ಪತ್ರೆಗೆ ಹೋಗುವುದು ನನಗೆ ಬೇಸರ ಅನಿಸಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು ನನ್ನನ್ನು ಜೈಲಿನಲ್ಲಿಯೇ ಸಾಯಲು ಬಿಡಿ ಎಂದು ಕಣ್ಣೀರು ಹಾಕಿದ್ದಾರೆ. ಜೀವನದ ಪ್ರತಿಯೊಂದು ಭರವಸೆಯನ್ನು ಕಳೆದುಕೊಂಡಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ಜೀವಂತವಾಗಿರುವುದಕ್ಕಿಂತ ಸಾಯುವುದು ಉತ್ತಮ ಎಂದು ಗೋಯಲ್ ನ್ಯಾಯಾಲಯದ ಮುಂದೆ ಕಣ್ಣೀರು ಹಾಕಿದರು.

ಗೋಯಲ್‌ ನಿವೇದನೆ ಆಲಿಸಿದ ಬಳಿಕ ಮಾತನಾಡಿದ ವಿಶೇಷ ಜಡ್ಜ್‌, ಗೋಯಲ್‌ ಅವರ ಮಾತುಗಳನ್ನು ತಾಳ್ಮೆಯಿಂದ ಆಲಿಸಿದ್ದೇನೆ. ಅವರು ಮಾತನಾಡುವಾಗ ಅವರ ದೇಹ ನಡುಗುತ್ತಿತ್ತು. ನಿಂತುಕೊಳ್ಳಲು ಕೂಡ ಅವರಿಗೆ ಸಹಾಯ ಬೇಕಾದಂತಹ ಪರಿಸ್ಥಿತಿಯಲ್ಲಿದ್ದಾರೆ. ಅವರಿಗೆ ಕಾಲು ಮಡಿಚಲೂ ಆಗುತ್ತಿಲ್ಲ.
ಆರೋಪಿಯನ್ನು ಅಸಹಾಯಕನಾಗಿ ಬಿಡುವುದಿಲ್ಲ. ಅವರಿಗೆ ಸರಿಯಾದ ಚಿಕಿತ್ಸೆಯೊಂದಿಗೆ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಬಗ್ಗೆ ಕಾಳಜಿಯನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

More News

You cannot copy content of this page