Lakshmi Hebbalkar Controversy Statement: ಉಲ್ಟಾ ಹೊಡೆದ ಲಕ್ಷ್ಮಿ ಹೆಬ್ಬಾಳ್ಕರ್: ವಿವಾದ ಸೃಷ್ಟಿ ಬೆನ್ನಲ್ಲೇ ಸುದ್ದಿ ತಿರುಚಲಾಗಿದೆ ಎಂದ ಸಚಿವೆ..!

ಬೆಳಗಾವಿ: ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿವಾದಾತ್ಮಕ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೇ ಅಸ್ತವಾಗಿಟ್ಟುಕೊಂಡ ವಿಪಕ್ಷ, ಕೈ ಪಡೆ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಇತ್ತ ತಮ್ಮ ಹೇಳಿಕೆ ವಿವಾದಾತ್ಮಕ ಸ್ವರೂಪ ಪಡೆಯುತ್ತಿದ್ದಂತೇ ನನ್ನ ಹೇಳಿಕೆ ಉದ್ದೇಶ ಅದಲ್ಲ ಎಂದು ಹೆಬ್ಬಾಳ್ಕರ್ ಉಲ್ಟಾ ಹೊಡೆದಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ ಅವರು, ನಾನು ಕನ್ನಡ ಸಮಾವೇಶದಲ್ಲಿ ಆಡಿದ ಮಾತುಗಳಿಗೆ ಸ್ಪಷ್ಟನೆ ನೀಡಬಯಸುತ್ತೇನೆ. ನಾನು ಹೆಮ್ಮೆಯ ಕನ್ನಡತಿಯಾಗಿ, ಕನ್ನಡದ ಮೇಲೆ ವಿಶೇಷವಾದ ಅಭಿಮಾನ ಇಟ್ಟುಕೊಂಡು ಗಡಿ ಭಾಗದಲ್ಲಿ ಇಷ್ಚೊಂದು ಉತ್ಸಾಹದಿಂದ ಅಲ್ಲಿನ ಕನ್ನಡಿಗರು – ಮರಾಠಿ ಭಾಷಿಕರೆಲ್ಲ ಸೇರಿ ಕನ್ನಡ ಸಮಾವೇಶ ನಡೆಸುತ್ತಿರುವುದನ್ನು ತಿಳಿದು, ಅವರ ಸಂಭ್ರಮದಲ್ಲಿ ಪಾಲ್ಗೊಳ್ಳುವ ಮತ್ತು ಅವರಲ್ಲಿ ಉತ್ಸಾಹ ತುಂಬುವ ಉದ್ದೇಶದಿಂದ ಅಲ್ಲಿನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ದೇನೆ. ಕನ್ನಡಿಗರಿಗೆ ಸ್ಫೂರ್ತಿ ತುಂಬುವ ಭರದಲ್ಲಿ ಅಲ್ಲಿ ನಾನು ಆಡಿದ ಮಾತುಗಳ ಸಕಾರಾತ್ಮಕತೆಯನ್ನು ಅರ್ಥೈಸಿಕೊಳ್ಳಬೇಕೆಂದು ಮಾಧ್ಯಮದ ಸ್ನೇಹಿತರಲ್ಲಿ ವಿನಂತಿಸಿದ್ದಾರೆ.

ನನ್ನ ಹೇಳಿಕೆಯನ್ನ ಬೇರೆ ರೀತಿಯಲ್ಲಿ ಅರ್ಥೈಸುವುದರಿಂದ ಅದು ಗಡಿಭಾಗದ ಕನ್ನಡಿಗರ ಉತ್ಸಾಹಕ್ಕೆ ಹಿನ್ನಡೆಯನ್ನುಂಟು ಮಾಡಬಹುದು. ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಸಹ ಮುಂಬೈ ಪ್ರಾಂತ್ಯದಲ್ಲಿತ್ತು, ಹಿಂದಿನಿಂದಲೂ ಕನ್ನಡಿಗರು – ಮರಾಠಿ ಭಾಷಿಕರು ಅನ್ಯೋನ್ಯತೆಯಿಂದ ಬಾಳುತ್ತಿದ್ದೇವೆ. ಈ ಅನ್ಯೋನ್ಯತೆ ಮುಂದುವರಿಯಬೇಕು ಎನ್ನುವ ಆಶಯವನ್ನು ನಾನು ವ್ಯಕ್ತಪಡಿಸಿದ್ದೇನೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾರಾಷ್ಟ್ರ ರಾಜ್ಯವೇ ಅಸ್ಥಿತ್ವದಲ್ಲೇ ಇಲ್ಲದ್ದರಿಂದ ಅಂತಹ ಅರ್ಥ ಕಲ್ಪಿಸುವ ಪ್ರಶ್ನೆಯೇ ಬರುವುದಿಲ್ಲ ಎಂದಿದ್ದಾರೆ.

ಕಾರದಗಾ ಕನ್ನಡ ಸಮಾವೇಶಕ್ಕೆ ಮುಂದಿನ ವರ್ಷದಿಂದ ರಾಜ್ಯ ಸರಕಾರದ ಆರ್ಥಿಕ ಸಹಾಯ ಒದಗಿಸುವ ಮತ್ತು ಅಲ್ಲಿನ ಸಂಘಟನೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡಿಸಲು ಪ್ರಯತ್ನಿಸುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡುವ ಮೂಲಕ ಅವರ ಉತ್ಸಾಹವನ್ನು ಹೆಚ್ಚಿಸಿದ್ದೇನೆ. ಅವರ ಉತ್ಸಾಹವನ್ನು ನಾವು, ನೀವೆಲ್ಲ ಸೇರಿ ಇನ್ನಷ್ಟು ಹೆಚ್ಚಿಸೋಣ, ಬರುವ ವರ್ಷಗಳಲ್ಲಿ ಈ ಸಮಾವೇಶ ಇನ್ನಷ್ಟು ಅದ್ಧೂರಿಯಾಗಿ ನಡೆಯುವಂತೆ ಮಾಡೋಣ ಎಂದು ತಿಳಿಸಿದ್ದಾರೆ.

More News

You cannot copy content of this page