Lok Sabha Election Preparations: ಚುನಾವಣೆ ಸಿದ್ಧತೆಗಾಗಿ ಸುರ್ಜೆವಾಲಾ ಆಗಮನ ಸಾಧ್ಯತೆ: ಸಚಿವ ಡಾ. ಜಿ.ಪರಮೇಶ್ವರ

ಬೆಂಗಳೂರು (ಜ.8):- ಲೋಕಸಭಾ ಚುನಾವಣೆಗೆ ಪಕ್ಷದಲ್ಲಿ ಸಿದ್ಧತೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ರಾಜ್ಯಕ್ಕೆ ಆಗಮಿಸುತ್ತಿರುವ ಸಾಧ್ಯತೆ ಇದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲೋಕಸಭಾ ಚುನಾವಣಾ ದೃಷ್ಟಿಯಿಂದ ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ, ಎಲ್ಲ ಜಿಲ್ಲೆಗಳ ಅಧ್ಯಕ್ಷರು ಹಾಗೂ ಪ್ರಮುಖ ನಾಯಕರ ಜೊತೆ ಸುರ್ಜೆವಾಲಾ ಅವರು ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲಬೇಕು. ರಾಜ್ಯದ ಎಲ್ಲ ನಾಯಕರ ಮೇಲೆ ಜವಾಬ್ದಾರಿ ಹೆಚ್ಚಿದೆ. ಕಳೆದ ಚುನಾವಣೆಗಿಂತ ಈ ಬಾರಿ ನಮ್ಮ ಪಕ್ಷ ಉತ್ತಮ ಸ್ಥಿತಿಯಲ್ಲಿದೆ. ಬಡ ಜನರ ಹಾಗೂ ಮಹಿಳೆಯರ ಆರ್ಥಿಕ ಮಟ್ಟ ಹೆಚ್ಚಿಸುವ ಉದ್ದೇಶದಿಂದ ನಮ್ಮ ಸರ್ಕಾರ ಅನುಷ್ಠಾನಗೊಳಿಸಿದ ಗ್ಯಾರಂಟಿ ಯೋಜನೆಗಳು ಹೆಚ್ಚು ಇಂಪ್ಯಾಕ್ಟ್ ಆಗಲಿದೆ ಎಂದು ಅಭಿಪ್ರಾಯಪಟ್ಟರು.

ಲೋಕಸಭಾ ಚುನಾವಣೆಯಲ್ಲಿ ಸಚಿವರು ಸ್ಪರ್ಧಿಸುವ ಬಗ್ಗೆ ಈವರೆಗೂ ಚರ್ಚೆಯಾಗಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರಕ್ಕೆ ನನ್ನ ಹೆಸರು ಕೇಳಿಬಂದಿತ್ತು. ಈ ಸಲ ಕೋಲಾರ ಕ್ಷೇತ್ರಕ್ಕೆ ಕೇಳಿಬರುತ್ತಿದೆ. ಆದರೆ, ಈ ಬಗ್ಗೆ ಎಲ್ಲಿಯು ಚರ್ಚೆ ನಡೆದಿಲ್ಲ. ಹೀಗಾಗಿ ಚುಮಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುವ ಪ್ರಶ್ನೆ ಉದ್ಭವಿಸುವುದಿಲ್ಲ. ಸಚಿವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಕೆಪಿಸಿಸಿ ಅಧ್ಯಕ್ಷರು ಹೇಳಿದರೆ ಅಧಿಕೃತ ಎಂದು ತಿಳಿಸಿದರು.

ಎಚ್.ಡಿ.ಕುಮಾರಸ್ವಾಮಿ ಅವರು ದೊಡ್ಡವರು. ಅವರು ಸರ್ಕಾರದ ಅಭಿವೃದ್ಧಿ, ಜವಾಬ್ಧಾರಿ ಕುರಿತು ಹೇಳಿಕೆ ನೀಡಿದರೆ ಪ್ರತಿಕ್ರಿಯಿಸಬಹುದು. ಅವರು ಬಳಸುವ ಅನಗತ್ಯ ಪದಗಳ ಬಗ್ಗೆ ಹೇಗೆ ಪ್ರತಿಪ್ರಿಯಿಸಬೇಕು. ನಾನು ಅವರೊಂದಿಗೆ 14 ತಿಂಗಳು ಕೆಲಸ ಮಾಡಿದ್ದೇನೆ. ಈ ರೀತಿ ಏಕೆ ಮಾತನಾಡುತ್ತಿದ್ದಾರೋ ನನಗೆ ಗೊತ್ತಿಲ್ಲ. ಅವರ ರೀತಿ ನನಗೆ ಮಾತನಾಡಲು ಬರುವುದಿಲ್ಲ ಎಂದರು.

ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಸಿರುವುದರಿಂದ ಸರ‍ಕಾರಕ್ಕೆ ಕಷ್ಟವಾಗಿಲ್ಲ.
ಅನುದಾನ ಹೊಂದಿಕೆ ಮಾಡುತ್ತಿದ್ದೇವೆ. ಕೇಂದ್ರ ಸರಕಾರದಿಂದ ರಾಜ್ಯಕ್ಕೆ 1.50 ಲಕ್ಷ ಕೋಟಿ ರೂ. ಬರಬೇಕು. ಈವರೆಗೂ ಬಂದಿಲ್ಲ. ಕೇಂದ್ರದಿಂದ ಅನುದಾನ ಬಂದಿದ್ದರೆ, ಮತ್ತಷ್ಟು ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚು ಅನುಕೂಲವಾಗುತ್ತಿತ್ತು ಎಂದು ತಿಳಿಸಿದರು.

ನಾರಾಯಣಗೌಡ ಅವರು ಬಿಡುಗಡೆ ನಂತರ ಮತ್ತೆ ಪ್ರತಿಭಟನೆ ನಡೆಸುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿಭಟನೆ ನಡೆಸುವುದು ಹಕ್ಕು. ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವುದು, ಸಾರ್ವಜನಿಕ ಆಸ್ತಿ ಹಾನಿ ಮಾಡುವುದು ತಪ್ಪು. ಕಾನೂನು ಕೈಗೆತ್ತಿಗೊಳ್ಳದೆ ಶಾಂತಿಯುವಾಗಿ ಪ್ರತಿಭಟನೆ ನಡೆಸಲಿ ಎಂದು ಹೇಳಿದರು.

ನಾನು ದೇಣಿಗೆ ಕೊಟ್ಟಿದ್ದೇನೆ:-
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ನಾನು ಸಹ ದೇಣಿಗೆ ಕೊಟ್ಟಿದ್ದೇನೆ. ಇದು ನನ್ನ ವೈಯಕ್ತಿಕ ವಿಚಾರ. ಎಷ್ಟು ದೇಣಿಗೆ ನೀಡಿದ್ದೇನೆ ಎಂದು ಹೇಳಿಕೊಳ್ಳಬಾರದು. ಅಯೋದ್ಯೆ ಪೂಜೆಯಲ್ಲಿ ಭಾಗಿಯಾಗುವ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ. ಪ್ರತ್ಯೇಕ ದಿನ ಹೋಗಿ ಪೂಜೆ ಸಲ್ಲಿಸುವ ಬಗ್ಗೆ ಹೈಕಮಾಂಡ್ ನಿರ್ಧರಿಸಿದರೆ ಅದಕ್ಕು ಸಿದ್ದ. ವಿಶೇಷ ಪೂಜೆ ಸಲ್ಲಿಸುತ್ತೇವೆ. ನಾವು ಹಿಂದುಗಳಲ್ವ? ನಮ್ಮ ಪಕ್ಷದಲ್ಲಿಯೂ ಹಿಂದುಗಳಿಲ್ಲವೇ? ಅದರಲ್ಲೇನು ತಪ್ಪಿದೆ ಎಂದು ಹೇಳಿದರು.

More News

You cannot copy content of this page