Flood Damage Compensation: ಬಿಜೆಪಿ ಸರ್ಕಾರದ ಮಾದರಿಯಲ್ಲಿ ಕೂಡಲೇ ಪರಿಹಾರ ನೀಡಿ, ಇಲ್ಲವಾದರೆ ರಾಜೀನಾಮೆ ಕೊಡಿ: ಸರ್ಕಾರಕ್ಕೆ ಸವಾಲೆಸೆದ ಆರ್‌.ಅಶೋಕ

ಬೆಂಗಳೂರು: ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಒಂದು, ಎರಡು ತಿಂಗಳಲ್ಲಿ ರೈತರಿಗೆ ಪ್ರವಾಹ ಹಾನಿ ಪರಿಹಾರ ವಿತರಿಸಿತ್ತು. ಈಗಿನ ಕಾಂಗ್ರೆಸ್‌ ಸರ್ಕಾರ ಕೂಡಲೇ ಪರಿಹಾರ ವಿತರಿಸಲಿ, ಇಲ್ಲವಾದರೆ ಎಲ್ಲರೂ ರಾಜೀನಾಮೆ ನೀಡಲಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ಸವಾಲೆಸೆದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರೆ ನಾಯಕರೊಂದಿಗೆ ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌ ಅವರನ್ನು ಆರ್‌.ಅಶೋಕ ಭೇಟಿ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯಪಾಲರನ್ನು ಭೇಟಿ ಮಾಡಿ ಕಾಂಗ್ರೆಸ್‌ ಸರ್ಕಾರದ ಬೇಜವಾಬ್ದಾರಿತನದ ಬಗ್ಗೆ ತಿಳಿಸಿದ್ದೇವೆ. ಸುಮಾರು 600 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಕಡೆಗೆ ಸರ್ಕಾರ ತಿರುಗಿಯೂ ನೋಡುತ್ತಿಲ್ಲ. ಅಧಿಕಾರಿಗಳು ಸಾಂತ್ವನ ಹೇಳಿಲ್ಲ, ಸಚಿವರು ಕೂಡ ರೈತರ ಬಳಿ ಹೋಗಿಲ್ಲ. ಉತ್ತರ ಕರ್ನಾಟಕದಲ್ಲಿ ವಲಸೆ ಆರಂಭವಾಗಿದೆ. ಬರಗಾಲ ಶುರುವಾಗಿ ಐದು ತಿಂಗಳಾದರೂ ಸರ್ಕಾರ ನಯಾ ಪೈಸೆ ಪರಿಹಾರ ನೀಡಿಲ್ಲ. ಎರಡು ಸಾವಿರ ರೂಪಾಯಿ ಪರಿಹಾರ ನೀಡುವ ಬಗ್ಗೆ ಎರಡು ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರು. ಇದುವರೆಗೆ ರೈತರಿಗೆ ಹಣ ತಲುಪಿಲ್ಲ. ಕಾಂಗ್ರೆಸ್‌ ಸರ್ಕಾರ ಅಧಿಕಾರದ ಲಾಲಸೆಯಿಂದಾಗಿ ರೈತರನ್ನು ಅನಾಥರನ್ನಾಗಿಸಿದೆ. ಏನೇ ಕೇಳಿದರೂ ಕೇಂದ್ರ ಸರ್ಕಾರ ನೆರವಿಗೆ ಬರುತ್ತಿಲ್ಲ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದ ನೆರವಿಗೆ ಕಾಯದೆ ರಾಜ್ಯ ಸರ್ಕಾರದಿಂದಲೇ ಪರಿಹಾರ ನೀಡಲಾಗಿತ್ತು. ಹಿಂದೆ ಕಾಂಗ್ರೆಸ್‌ ಇದ್ದಾಗ ಪರಿಹಾರ ನೀಡಲು ಏಳೆಂಟು ತಿಂಗಳು ತಡ ಮಾಡುತ್ತಿದ್ದರು. ಬಿಜೆಪಿ ಅವಧಿಯಲ್ಲಿ ಮೊದಲ ಬಾರಿಗೆ ಡಿಬಿಟಿ ಮುಖಾಂತರ ರೈತರಿಗೆ 3 ಸಾವಿರ ಕೋಟಿ ರೂ.ಗೂ ಅಧಿಕ ಪರಿಹಾರ ನೀಡಲಾಗಿತ್ತು. ಈಗಿನ ಸರ್ಕಾರ ಕೇವಲ 100 ಕೋಟಿ ರೂ. ಪರಿಹಾರ ನೀಡಲಿದೆ. ಬಿಜೆಪಿ ಇದ್ದಾಗ ರಾಜ್ಯದಿಂದ ಪರಿಹಾರ ನೀಡಿದ ಬಳಿಕ ಕೇಂದ್ರದಿಂದ ಪರಿಹಾರ ಬಂದಿತ್ತು. ನಮ್ಮ ಸರ್ಕಾರ ದುಪ್ಪಟ್ಟು ಪರಿಹಾರ ನೀಡಿತ್ತು. ಉದಾಹರಣೆಗೆ, 18 ಸಾವಿರ ರೂ. ಇದ್ದರೆ 10 ಸಾವಿರ ರೂ. ಸೇರಿಸಿ 28 ಸಾವಿರ ರೂ. ಪರಿಹಾರ ನೀಡಲಾಗಿತ್ತು. ಈಗಿನ ಕಾಂಗ್ರೆಸ್‌ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲದೆ, ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸುತ್ತಿದೆ. ಬರಗಾಲ ಬರಲು ರೈತರು ಕಾಯುತ್ತಿದ್ದಾರೆ ಎಂದು ಸಚಿವರೇ ಹೇಳುತ್ತಾರೆ ಎಂದು ದೂರಿದರು.

ಇವೆಲ್ಲ ಕಾರಣಗಳಿಂದಾಗಿ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರದ ಬೇಜವಾಬ್ದಾರಿತನದ ಬಗ್ಗೆ ವಿವರಿಸಿದ್ದೇವೆ. ಈ ಸರ್ಕಾರ ರೈತರಿಗೆ ಪರಿಹಾರ ನೀಡದೆ ಬೊಗಳೆ ಬಿಡುತ್ತಿದೆ. ಹಿಂದಿನ ನಮ್ಮ ಬಿಜೆಪಿ ಸರಕಾರ ಒಂದು, ಎರಡು ತಿಂಗಳಲ್ಲಿ ಪರಿಹಾರ ನೀಡಿರುವಾಗ ಈಗಿನ ಸರ್ಕಾರ ಕೂಡ ಅದೇ ರೀತಿ ಪರಿಹಾರ ಕೊಡಲಿ, ಇಲ್ಲವಾದರೆ ರಾಜೀನಾಮೆ ನೀಡಲಿ. ಮುಸಲ್ಮಾನರಿಗೆ 1 ಸಾವಿರ ಕೋಟಿ ರೂ. ನೀಡುವವರು ರೈತರಿಗೆ ಕೇವಲ 100 ಕೋಟಿ ರೂ. ನೀಡುತ್ತಾರೆ. ಈ ರೀತಿ ಮಾಡಿದರೆ ರೈತರ ಶಾಪ ತಟ್ಟಲಿದೆ ಎಂದು ಆಕ್ರೋಶ ಹೊರಹಾಕಿದರು.

More News

You cannot copy content of this page