NO KARNATAKA TABLEAUS IN REPUBLIC DAY: ಗಣರಾಜ್ಯೋತ್ಸವದ ಪಥ ಸಂಚಲನಕ್ಕೆ ರಾಜ್ಯದ ಸ್ತಬ್ಧ ಚಿತ್ರಕ್ಕಿಲ್ಲ ಅವಕಾಶ : ಕನ್ನಡಿಗರಿಗೆ ಅಪಮಾನ: ಸಿಎಂ

ಬೆಂಗಳೂರು : ಜನವರಿ 26 ರಂದು ನವದೆಹಲಿಯಲ್ಲಿ ನಡೆಯಲಿರುವ ಅದ್ದೂರಿ ಗಣರಾಜ್ಯೋತ್ಸವದ ಪಥ ಸಂಚಲನಕ್ಕೆ ರಾಜ್ಯದ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಅಪಮಾನ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.

ನಿರಾಕರಣೆ ಕುರಿತು ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಟ್ವೀಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಪರೇಡ್ ಸಮಿತಿಗೆ ಟ್ಯಾಗ್ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಕೇಂದ್ರ ಸರ್ಕಾರ ಮತ್ತು ಆಯ್ಕೆ ಸಮಿತಿಯು ಮಾಡಿರುವ ತಮ್ಮ ತಪ್ಪನ್ನು ತಿದ್ದಿಕೊಂಡು ಗಣರಾಜ್ಯೋತ್ಸವ ಪರೇಡ್ ಸ್ತಬ್ಧಚಿತ್ರ ಪ್ರದರ್ಶನಕ್ಕೆ ರಾಜ್ಯದಿಂದ ಅವಕಾಶ ನೀಡಬೇಕೆಂದು ಮುಖ್ಯಮಂತ್ರಿ ಅವರು ಒತ್ತಾಯಿಸಿದ್ದಾರೆ.
ಕಳೆದ ವರ್ಷ ರಾಜ್ಯದಲ್ಲಿ ಬಿಜೆಪಿ ಆಡಳಿತ ಹೊಂದಿದ್ದ ಸಂದರ್ಭದಲ್ಲೂ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡಿತ್ತು. ವಿವಾದದ ಸ್ವರೂಪ ಪಡೆದ ನಂತರ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಈ ಬಾರಿ ಅದೇ ಚಾಳಿಯನ್ನು ಕೇಂದ್ರ ಮುಂದುವರೆಸಿದೆ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿರುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಜನವರಿ 26ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡುವ ಮೂಲಕ ಕೇಂದ್ರ ಸರ್ಕಾರವು ನಾಡಿನ ಏಳು ಕೋಟಿ ಕನ್ನಡಿಗರಿಗೆ ಅಪಮಾನ ಮಾಡಿದೆ. ಕಳೆದ ವರ್ಷ ಕೂಡ ಮೊದಲಿಗೆ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡಿ, ವಿವಾದದ ಸ್ವರೂಪ ಪಡೆದ ನಂತರ ಅನುಮತಿ ನೀಡಿತ್ತು, ಈ ಬಾರಿ ಮತ್ತೆ ಕನ್ನಡಿಗರನ್ನು ಅವಮಾನಿಸುವ ತನ್ನ ಚಾಳಿಯನ್ನು ಮುಂದುವರೆಸಿದೆ. ನವಕರ್ನಾಟಕದ ಅಭಿವೃದ್ಧಿಯ ದೃಷ್ಠಾರ, ಸಾಮಾಜಿಕ ನ್ಯಾಯದ ಹರಿಕಾರ, ನೀರಾವರಿ, ಬ್ಯಾಂಕಿಂಗ್‌, ಮೂಲಸೌಕರ್ಯದ ಕ್ಷೇತ್ರಗಳ ಅಭಿವೃದ್ದಿಯ ಮೂಲಕ ಮೈಸೂರನ್ನು ಒಂದು ಮಾದರಿ ರಾಜ್ಯವಾಗಿ ಕಟ್ಟಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಸ್ತಬ್ಧಚಿತ್ರ, ನೆಲದ ರಕ್ಷಣೆಗಾಗಿ ಸರ್ವಸ್ವವನ್ನೂ ತ್ಯಾಗಗೈದ ಅಪ್ರತಿಮ ದೇಶಪ್ರೇಮಿ ರಾಣಿ ಚೆನ್ನಮ್ಮ ಅವರ ಸ್ತಬ್ಧಚಿತ್ರ, ಕರುನಾಡಿನ ಪ್ರಾಕೃತಿಕ ಸೌಂದರ್ಯ ಮತ್ತು ಬ್ರಾಂಡ್ ಬೆಂಗಳೂರು ಹೀಗೆ 4 ಸ್ತಬ್ಧಚಿತ್ರ ಮಾದರಿಗಳಿಗೆ ಅವಕಾಶ ಕೋರಿ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಆದರೆ ಕೇಂದ್ರದ ಆಯ್ಕೆ ಸಮಿತಿಯು ನಮ್ಮ ಮನವಿಯನ್ನು ತಿರಸ್ಕರಿಸಿ, ನಾಡಿನ ಅಸೀಮ ಸಾಧನೆ ಮತ್ತು ಮಾದರಿ ಸಾಧಕರನ್ನು ದೇಶಕ್ಕೆ ಪರಿಚಯಿಸುವ ಅವಕಾಶವನ್ನು ಕಸಿದುಕೊಂಡಿದೆ.
ರಾಜ್ಯದಲ್ಲಿ @INCKARNATAK ಸರ್ಕಾರ ಅಧಿಕಾರಕ್ಕೆ ಬಂದಿರುವುದು ಕೇಂದ್ರದ @BJPINDIA ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ತೆರಿಗೆ ಪಾಲಿನಲ್ಲಿ ವಂಚನೆ, ಬರಪರಿಹಾರದಲ್ಲಿ ಅನ್ಯಾಯ, ಕನ್ನಡಿಗರು ಕಟ್ಟಿರುವ ಬ್ಯಾಂಕ್, ಬಂದರು, ವಿಮಾನ ನಿಲ್ದಾಣಗಳ ಮಾರಾಟ ಹೀಗೆ ಹೆಜ್ಜೆ ಹೆಜ್ಜೆಗೂ ಕನ್ನಡಿಗರ ಮೇಲೆ ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶದಿಂದ ಪ್ರಹಾರ ಮಾಡುತ್ತಿದೆ. ಇದರ ಜೊತೆಗೆ ಈಗ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಅವಕಾಶ ನಿರಾಕರಿಸಿ ನಮ್ಮ ಅಸ್ಮಿತೆಯ ಮೇಲೆ ದಾಳಿಗೆ ಇಳಿದಿದೆ. ಕನ್ನಡ- ಕನ್ನಡಿಗ ಮತ್ತು ಕರ್ನಾಟಕಕ್ಕೆ ನಿರಂತರವಾಗಿ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯದಿಂದ ಕನ್ನಡಿಗರು ಈಗಾಗಲೇ ರೋಸಿಹೋಗಿದ್ದಾರೆ. ಅವರ ತಾಳ್ಮೆಯನ್ನು ಪರೀಕ್ಷಿಸಲು ಕೇಂದ್ರ ಸರ್ಕಾರ ಹೋಗಬಾರದು. ಈಗಲೂ ಕಾಲ ಮಿಂಚಿಲ್ಲ, ಕೇಂದ್ರ ಸರ್ಕಾರ ತಕ್ಷಣ ತನ್ನ ತಪ್ಪನ್ನು ತಿದ್ದಿಕೊಂಡು ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಂಡು ದೇಶದ ಹೆಮ್ಮೆಯ ಗಣರಾಜ್ಯೋತ್ಸವ ಪರೇಡ್ ನ ಸ್ತಬ್ಧಚಿತ್ರದಲ್ಲಿ ನಮಗೆ ಅವಕಾಶ ನೀಡಬೇಕು ಎಂದು ಒತ್ತಾಯ ಮಾಡುತ್ತೇನೆ.
@narendramodi
@AmitShah

DeliRepublicDayParade

ಕರ್ನಾಟಕ ರಾಜ್ಯಕ್ಕೆ ಸೂಕ್ತ ಸ್ಥಾನವನ್ನು ನೀಡಬೇಕೆಂದು ಮುಖ್ಯಮಂತ್ರಿ ಅವರು ಆಗ್ರಹಿಸಿದ್ದಾರೆ.

More News

You cannot copy content of this page