Ustad Rashid Khan Dies: ಸಂಗೀತ ಮಾಂತ್ರಿಕ ಉಸ್ತಾದ್ ರಶೀದ್ ಖಾನ್ ರನ್ನ ಬಲಿ ಪಡೆದ ಕ್ಯಾನ್ಸರ್

ಕೊಲ್ಕತ್ತಾ: ಪದ್ಮಶ್ರಿ ಪ್ರಶಸ್ತಿ ಹಾಗೂ 2006ರಲ್ಲಿ ಸಂಗೀತ್‌ ನಾಟಕ್‌ ಅಕಾಡೆಮಿ ಗೌರವ ಪಡೆದುಕೊಂಡಿದ್ದ, ಜಬ್ ವೀ ಮೇಟ್’ ಚಿತ್ರದ ಖ್ಯಾತಿಯ ಸಿಂಗರ್ ಉಸ್ತಾದ್ ರಶೀದ್ ಖಾನ್ (55) ಅವರು ಇಂದು (ಜ.9) ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. ಕೊಲ್ಕತ್ತಾದ ಟಾಟಾ ಮೆಮೊರಿಯಲ್ ಆಸ್ಪತ್ರೆಯಲ್ಲಿ ಉಸ್ತಾದ್ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಉಸ್ತಾದ್ ರಶೀದ್ ಖಾನ್, ಕೆಲ ಸಮಯದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅದಕ್ಕಾಗಿ ಸೂಕ್ತ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ದೀರ್ಘಕಾಲದಿಂದ ವೆಂಟಿಲೇಟರ್‌ನಲ್ಲಿಯೂ ಇದ್ದರು. ಇದೀಗ ಚಿಕಿತ್ಸೆ ಫಲಿಸದೇ ಉಸ್ತಾದ್ ಇಹಲೋಕ ತ್ಯಜಿಸಿದ್ದಾರೆ.

“ರಶೀದ್ ಇನ್ನಿಲ್ಲ ಎಂದು ನಂಬಲು ಸಾಧ್ಯವಾಗುತ್ತಿಲ್ಲ”

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಂತಾಪ ಸೂಚಿಸಿದ ಬೆಂಗಾಲ್ ಸಿಎಂ ಮಮತಾ ಬ್ಯಾನರ್ಜಿ, ಇಡೀ ದೇಶಕ್ಕೆ ಮತ್ತು ಮ್ಯೂಸಿಕ್ ಬಂಧುಗಳಿಗೆ ಅವರ ನಿಧನದಿಂದ ನಷ್ಟವಾಗಿದೆ. ರಶೀದ್ ಇನ್ನಿಲ್ಲ ಎಂದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೋಲ್ಕತ್ತಾದ ಪೀರ್ಲೆಸ್ ಆಸ್ಪತ್ರೆಯಲ್ಲಿ ಸಂಜೆ 6 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತದೆ. ಅವರ ಪಾರ್ಥಿವ ಶರೀರವನ್ನು ರಾತ್ರಿ ಕೋಲ್ಕತ್ತಾದ ಪೀಸ್ ಹೆವನ್‌ಗೆ ಕಳುಹಿಸಲು ನಿರ್ಧರಿಸಿದ್ದು, ಅಂತ್ಯಕ್ರಿಯೆ ಜನವರಿ 10 ರಂದು ನಡೆಯಲಿದೆ ಎಂದು ಕುಟುಂಬ ತಿಳಿಸಿದೆ.

1968ರ ಜುಲೈ 1 ರಂದು ಜನಿಸಿದ್ದ ಉಸ್ತಾದ್‌ ರಶೀದ್‌ ಖಾನ್‌, ಹಿಂದೂಸ್ತಾನಿ ಸಂಗೀತ ಸಂಪ್ರದಾಯದ ಶಾಸ್ತ್ರೀಯ ಸಂಗೀತಗಾರರಾಗಿದ್ದರು. 2022ರಲ್ಲಿ ಕೇಂದ್ರ ಸರ್ಕಾರ ಇವರಿಗೆ ದೇಶದ ಮೂರನೇ ಅತ್ಯುನ್ನತ ನಾಗರೀಕ ಪುರಸ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

More News

You cannot copy content of this page