Welfare Karnataka Region Development Board: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ: ಕ್ರಿಯಾ ಯೋಜನೆ ಸಮರೋಪಾದಿಯಲ್ಲಿ ಅನುಷ್ಠಾನ ಮಾಡಲು ಸಿಎಂ ಖಡಕ್ ಸೂಚನೆ

ಬೆಂಗಳೂರು, ಜನವರಿ 9- ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಪ್ರಸಕ್ತ ವರ್ಷದ ಕ್ರಿಯಾ ಯೋಜನೆಯ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು.

ಅವರು ಇಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನೆ ನಡೆಸಿದರು.

ಮಂಡಳಿಯಲ್ಲಿ ಪ್ರಸ್ತುತ 2106 ಕೋಟಿ ಲಭ್ಯವಿದೆ. ಸರ್ಕಾರ ಅಧಿಕಾರಕ್ಕೆ ಬಂದ ನಂತರ 757.66 ಕೋಟಿ ರೂ. ವೆಚ್ಚ ಮಾಡಲಾಗಿದೆ, ಈ ಆರ್ಥಿಕ ವರ್ಷಾಂತ್ಯದ ವೇಳೆಗೆ ಇನ್ನೂ ಒಂದು ಸಾವಿರ ಕೋಟಿ ರೂ. ವೆಚ್ಚ ಆಗುವ ಸಾಧ್ಯತೆಗಳಿವೆ.
ಇದಕ್ಕಾಗಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವಂತೆ, ಮಂಡಳಿಯ ಅಧ್ಯಕ್ಷರು, ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರುಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಿಯಮಿತವಾಗಿ ಪ್ರಗತಿ ಪರಿಶೀಲನೆ ನಡೆಸಿ. ಹಿನ್ನಡೆ ಕಂಡಿರುವ ಯೋಜನೆಗಳ ತ್ವರಿತ ಅನುಷ್ಠಾನ ಮಾಡಬೇಕು. ಪ್ರಾರಂಭವಾಗದ ಕಾಮಗಾರಿಗಳನ್ನು ಮರುಪರಿಶೀಲನೆ ಮಾಡಿ, ಬದಲಿಸುವ ಮೂಲಕ ಸಕಾಲದಲ್ಲಿ ಅನುದಾನ ವೆಚ್ಚ ಮಾಡುವಂತೆ ಸೂಚಿಸಿದರು. ಕಾಮಗಾರಿಗಳ ಅನುಷ್ಠಾನಕ್ಕೆ ನೀಲ ನಕ್ಷೆ ರೂಪಿಸಿ, ಅದರಂತೆ ಕಾರ್ಯನಿರ್ವಹಿಸಲು ಸೂಚಿಸಿದರು.

ಮುಂದಿನ ವರ್ಷದ ಕ್ರಿಯಾ ಯೋಜನೆಯನ್ನು ಮಾರ್ಚ್‌ ಅಂತ್ಯದ ಒಳಗೆ ರೂಪಿಸುವಂತೆ ಸೂಚಿಸಿದರು. ಎಸ್‌.ಸಿ.ಎಸ್‌.ಪಿ. / ಟಿ.ಎಸ್.ಪಿ. ಅಡಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರ ಜನಸಂಖ್ಯೆ ಶೇ. 50 ಕ್ಕೂ ಹೆಚ್ಚಾಗಿ ವಾಸವಿರುವ ಸ್ಥಳಗಳನ್ನು ಅಭಿವೃದ್ಧಿ ಪಡಿಸಲು ಸೂಚಿಸಿದರು.

ಪ್ರಗತಿಯಲ್ಲಿರುವ ಕೆಲಸಗಳನ್ನೆಲ್ಲ ಈ ವರ್ಷವೇ ಪೂರ್ಣಗೊಳಿಸಬೇಕು. ಹಿಂದಿನ ವರ್ಷದ ಕಾಮಗಾರಿಗಳನ್ನು ಆದಷ್ಟು ಶೀರ್ಘ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಕೆಕೆಆರ್ ಡಿಬಿ ಅಧ್ಯಕ್ಷರಾದ ಅಜಯ್ ಸಿಂಗ್, ಸಚಿವರುಗಳಾದ ಶರಣ ಪ್ರಕಾಶ್ ಪಾಟೀಲ್, ಈಶ್ವರ್ ಖಂಡ್ರೆ, ಜಮೀರ್ ಅಹಮದ್ ಖಾನ್, ಶರಣಬಸಪ್ಪ ದರ್ಶನಾಪುರ, ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ, ಬೋಸ್ ರಾಜು, ರಹೀಂ ಖಾನ್, ಡಿ.ಸುಧಾಕರ್ ಜತೆಗೆ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಬಿ.ಆರ್.ಪಾಟೀಲ್, ಆರ್ಥಿಕ ಸಲಹೆಗಾರ ಬಸವರಾಜ ರಾಯ ರೆಡ್ಡಿ, ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್ ಸಭೆಯಲ್ಲಿ ಭಾಗಿಯಾದರು.

ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್ ಸೇರಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

More News

You cannot copy content of this page