ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಲಗಿರೋದು ಒಂದೇ ಒಂದು ದಾಖಲೆ ಕೊಡಿ. ಅದೇ ಸಿಎಂ ಸಿದ್ದರಾಮಯ್ಯ ಅವರು ಮಲಗಿರೋದು ಸಾಕ್ಷಿ ಇದೆ. ಇತರರು ಬಂದು ಎದ್ದೇಳಣ್ಣ ಸಿದ್ರಾಮಣ್ಣ ಅಂತ ಎಚ್ಚರಿಸಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯವಾಡಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರು ಮಲಗಿರೋದು ಒಂದು ದಾಖಲೆ ತೋರಿಸಿ ಎಂದು ಸವಾಲು ಹಾಕಿದರು. ನಿದ್ದೆರಾಮಯ್ಯ ಅಂತ ನಿಮಗೆ ಹೆಸರಿದೆಯೋ, ಮೋದಿಗೋ.? ಎಂದು ಪ್ರಶ್ನಿಸಿದ ಅವರು, ನಿದ್ದೆ ಮಾಡೋದಕ್ಕೆ ನೀವೇ ಬ್ರಾಂಡ್ ಅಂಬಾಸಿಡರ್ ಎಂದು ಕಿಡಿಕಾರಿದರು.
ಹಾವೇರಿ ಪ್ರಕರಣ ಮುಚ್ಚಿಹಾಕುವ ಯತ್ನ
ಹಾವೇರಿ ಪ್ರಕರಣದಲ್ಲಿ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಟೀಕಿಸಿದ ಅವರು, ಸಂತ್ರಸ್ತೆಯನ್ನೇ ಸ್ಥಳಾಂತರ ಮಾಡಲಾಗಿದೆ, ನಾವು ಪ್ರಕರಣ ಮುಚ್ಚಿ ಹಾಕಲು ಬಿಡಲ್ಲ ಎಂದು ಹೇಳಿದರು.
ಸಚಿವ ರಾಜಣ್ಣ ದುರಂಹಕಾರದ ಮಾತನ್ನು ಆಡಿದ್ದಾರೆ
ಬಾಬರಿ ಮಸೀದಿ ಧ್ವಂಸ ಬಳಿಕ ರಾಮನ ವಿಗ್ರಹ ಅಂತ ಟೂರಿಂಗ್ ಟಾಕೀಸ್ ಗೊಂಬೆಗಳನ್ನಿಟ್ಟಿದ್ರು ಎಂಬ ಸಚಿವ ಕೆ ಎನ್ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕೆ ಎನ್ ರಾಜಣ್ಣರ ಇಂಥ ಹೇಳಿಕೆಯಿಂದ ರಾಮನ ಘನತೆ ಕುಂದಲ್ಲ, ರಾಜಣ್ಣ ದುರಹಂಕಾರದ ಹೇಳಿಕೆ ನೀಡಿದ್ದಾರೆ, ರಾಮನನ್ನು ಗೊಂಬೆಗೆ ಹೋಲಿಸಿ ಅಪಮಾನ ಮಾಡಿದ್ದಾರೆ ಇವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರು ರಾಜಣ್ಣ ಹೇಳಿಕೆ ಸಮರ್ಥಿಸುವ ಕೆಲಸ ಮಾಡಬಾರದು ಎಂದು ಆಗ್ರಹಿಸಿದ ಅವರು, ಒಂದು ವೇಳೆ ಸಮರ್ಥಿಸಿಕೊಂಡರೆ ಅದೇ ಅವರ ಅವನತಿಗೆ ಕೊನೇ ಮುಳ್ಳಾಗಲಿದೆ ಎಂದು ಭವಿಷ್ಯ ನುಡಿದರು.
ಯತೀಂದ್ರ ಅವರದ್ದು ತಂದೆ ಬಗೆಗಿನ ಕುರುಡು ಪ್ರೇಮ
ಲೋಕಸಮರ ಗೆದ್ದರೆ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂಬ ಅವರ ಪುತ್ರ ಯತೀಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಮುಂದುವರೆಯುವ ವಿಚಾರ ಜನಕ್ಕೆ ಬೇಕಾಗಿಲ್ಲ, ಅದು ಅವರ ಪಕ್ಷದ ಆಂತರಿಕ ವಿಚಾರ ಎಂದರು.
ಯತೀಂದ್ರ ಪಕ್ಷದ ವಿಚಾರಗಳನ್ನು ನಿರ್ಣಯ ಮಾಡುವ ಸ್ಥಾನದಲ್ಲಿ ಇಲ್ಲ, ಈ ಹೇಳಿಕೆ ಮೂಲಕ ತಂದೆ ಮೇಲೆ ಯತೀಂದ್ರ ಕುರುಡು ಪ್ರೇಮ ಪ್ರದರ್ಶಿಸಿದ್ದಾರೆ, ಕಾಂಗ್ರೆಸ್ ನಲ್ಲಿ ಒಡಕಿದೆ, ಡಿಕೆಶಿಗೆ ಒಂದು ಬಣ ಜೈ ಅನ್ನುತ್ತಿದೆ, ಸಿದ್ದರಾಮಯ್ಯ ಪರ ಇನ್ನೊಂದು ಬಣ ಇದೆ ಎಂದು ವ್ಯಂಗ್ಯವಾಡಿದರು.