ಧಾರವಾಡ: ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಸೇರಿದ್ದು ನನಗಂತೂ ತುಂಬಾ ಖುಷಿಯಾಗಿದೆ, ಅವರು ಯಾತಕ್ಕಾಗಿ ಬಂದು ಯಾತಕ್ಕಾಗಿ ಹೋದರು ಎನ್ನೋದನ್ನ ಅವರನ್ನೇ ಕೇಳಬೇಕು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರೋವಾಗ ಒಂದು ಹೇಳಿದ್ದರು, ಈಗ ಹೋಗುವಾಗ ಒಂದು ಹೇಳಿದ್ದಾರೆ, ಇದೆಲ್ಲಾ ರಾಜಕಾರಣದಲ್ಲಿ ಸಾಮಾನ್ಯ, ಜಗದೀಶ ಶೆಟ್ಟರ್ ಪಾರ್ಟಿ ಬಿಟ್ಟು ಬಂದಾಗ ಅವರು ಮಾತನಾಡಿದ್ದನ್ನು ಮತ್ತೊಮ್ಮೆ ಎಲ್ಲಾರೂ ಕೇಳಿಸಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅವರಿಗೆ ಗೌರವ ಕೊಟ್ಟು ಎಂಎಲ್ಸಿ ಮಾಡಿತ್ತು, ಎಲ್ಲಾ ಸಭೆಯಲ್ಲಿ ಗೌರವ ಕೊಟ್ಟಿದ್ದೇವೆ, ಈಗ ದಿಢೀರ್ ಪಾರ್ಟಿ ಬಿಟ್ಟು ಹೋಗಿದ್ದಾರೆ, ಅವರು ಬಿಜೆಪಿ ಸೇರುತ್ತಾರೆ ಎಂಬ ಹೊಗೆ ಆಡುತ್ತಿತ್ತು. ಅವರೊಬ್ಬ ಮಾಜಿ ಸಿಎಂ ಅವರಿಗೆ ಒಂದು ಸಿಸ್ಟಮ್ ಇರಬೇಕು ಎಂದರು.

ಅವರು ಹೋಗಿದ್ದಕ್ಕೆ ನಮಗೇನು ನಷ್ಟ ಇಲ್ಲ, ನಮ್ಮದು ಎರಡು ಬಾಗಿಲು ಇರುವ ಪಾರ್ಟಿ, ಸಿಟಿ ಬಸ್ ಇದ್ದಂತೆ, ಯಾರಾದರೂ ಹತ್ತಬಹುದು ಯಾರಾದರೂ ಇಳಿದುಕೊಳ್ಳಬಹುದು, ನಮ್ಮ ಪಾರ್ಟಿಗೆ ಶಾಸಕರು ಸೇರ್ಪಡೆಯಾಗುವವರಿದ್ದಾರೆ, ಮುಂದೆ ನಮ್ಮ ಪಾರ್ಟಿಗೆ ಸೇರುತ್ತಾರೆ, ಸಮಯ ಬಂದಾಗ ಹೇಳುತ್ತೇವೆ ಎಂದರು.