GYANVAPI VERDICT A VIOLATION OF WORSHIP ACT: ಬಾಬರಿ ಮಸೀದಿಯಂತೆ ಮತ್ತೊಂದು ಮಸೀದಿಯನ್ನು ಕಳೆದುಕೊಳ್ಳಲು ನಾವು ಸಿದ್ದರಿಲ್ಲ: ಓವೈಸಿ

ಲಖನೌ : ವಿವಾದಿತ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಪೂಜೆ ಸಲ್ಲಿಸಲು ಹಿಂದೂ ಅರ್ಚರಿಗೆ ನ್ಯಾಯಾಲಯ ಅವಕಾಶ ಕಲ್ಪಿಸಿರುವುದಕ್ಕೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನಾವು ಬಾಬರಿ ಮಸೀದಿಯನ್ನು ಕಳೆದುಕೊಂಡಿದ್ದೇವೆ. ಅದೇ ರೀತಿಯಲ್ಲಿ ಮತ್ತೊಂದು ಮಸೀದಿಯನ್ನು ಕಳೆದುಕೊಳ್ಳಲು ಸಿದ್ದರಿಲ್ಲ ಎಂದು ಹೇಳಿದ್ದಾರೆ.
ನ್ಯಾಯಾಲಯದ ತೀರ್ಪಿನ ಮೇಲೆ ಈ ಪ್ರಕರಣ ನಿಂತಿದ್ದು, ಇದು ಪೂಜಾ ಸ್ಥಳಗಳ ಕಾಯಿದೆ 1991 ರ ಸ್ಪಷ್ಟ ಉಲ್ಲಂಘನೆಯಾಗಿದೆ, ಇದು ಸಂಪೂರ್ಣ ತಪ್ಪು ನಿರ್ಧಾರ ಎಂದು ಓವೈಸಿ ಹೇಳಿದ್ದಾರೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಮಸೀದಿಗಳ ಸಮಿತಿ ಈ ತೀರ್ಪನ್ನು ಸುಪ್ರಿಂಕೋರ್ಟ್ ನಲ್ಲಿ ಪ್ರಶ್ನಿಸಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದೇ ರೀತಿಯಲ್ಲಿ ಸಮೀಕ್ಷೆಗಳು ಮುಂದುವರೆದರೆ ಬಾಬರಿ ಮಸೀದಿಗೂ ಮುನ್ನ ಮತ್ತು ನಂತರದ ಘಟನೆಗಳು ಪುನಾರಾವರ್ತಿತವಾಗುತ್ತವೆ ಎಂದೂ ಅವರು ಹೇಳಿದ್ದಾರೆ.
ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಬದಲಾವಣೆ ಮಾಡುವವರು ಅರಸ್ಟ್ 15, 1947ರ ಯಥಾಸ್ಥಿತಿಯನ್ನು ಅನುಸರಿಸಬೇಕು ಎಂದು ಪೂಜಾ ಸ್ಥಳಗಳ ಕಾಯಿದೆ 1991 ಹೇಳುತ್ತದೆ. ಅದನ್ನು ಮೀರಿದ್ದು ಕಂಡುಬಂದರೆ ನ್ಯಾಯಾಲಯ 3 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

More News

You cannot copy content of this page