JHARKHAND CM ARREST: 600 ಕೋಟಿ ಭೂಹಗರಣ ಆರೋಪ: ಸಿಎಂ ಹೇಮಂತ್ ಸೊರೇನ್ ಬಂಧನ: ಚಂಪೈ ಜಾರ್ಖಂಡ್ ನೂತನ ಮುಖ್ಯಮಂತ್ರಿ

ರಾಂಚಿ : 600 ಕೋಟಿ ರೂಪಾಯಿ ಭೂ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ನಂತರ ಇವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.
ಇದೇ ಸಂದರ್ಭದಲ್ಲಿ ಆಡಳಿತಾರೂಢ ಮೈತ್ರಿಕೂಟದ ನೇತೃತ್ವ ವಹಿಸಿದ್ದ ಜಾರ್ಖಂಡ್ ಮುಕ್ತಿ ಮೋರ್ಚಾದ ಶಾಸಕಾಂಗ ಪಕ್ಷದ ನಾಯಕರಾಗಿ ಹಿರಿಯ ನಾಯಕ ಹಾಗೂ ಸಾರಿಗೆ ಸಚಿವರಾಗಿದ್ದ ಚಂಪೈ ಸೊರೇನ್ ಸರ್ವಾನುಮತದಿಂದ ಆಯ್ಕೆಯಾಗಿದ್ದು, ಅವರು ಸರ್ಕಾರ ರಚಿಸಲು ಹಕ್ಕು ಪ್ರತಿಪಾದಿಸಿದ್ದಾರೆ.
ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಇಡಿ ಅಧಿಕಾರಿಗಳು ಸುಮಾರು ಏಳು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದರು. ನಂತರ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದರು. ಇದಾದ ಕೆಲವೇ ಕ್ಷಣಗಳಲ್ಲಿ ಇಡಿ ಅಧಿಕಾರಿಗಳು ಹೇಮಂತ್ ಸೊರೇನ್ ಅವರನ್ನು ಬಂಧಿಸಿದರು.
ಇದೇ ಸಂದರ್ಭದಲ್ಲಿ ಸಿಎಂ ನಿವಾಸದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಚಂಪೈ ಸೊರೇನ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ವಿಚಾರಣೆಗೆ ಹಾಜರಾಗಲು ಹೇಮಂತ್ ಸೊರೇನ್ ಅವರಿಗೆ ಏಳು ಬಾರಿ ಸಮನ್ಸ್ ನೀಡಿದರೂ ಅವರು ಹಾಜರಾಗಿರಲಿಲ್ಲ. ಬಂಧನದ ಭೀತಿ ಎದುರಾದಾಗ ಅವರು ಆಡಳಿತರೂಢ ಮೈತ್ರಿಕೂಟದ ಶಾಸಕರ ಸಭೆ ನಡೆಸಿ, ಉತ್ತರಾಧಿಕಾರಿಯನ್ನು ಆಯ್ಕೆಮಾಡಿದರು.
ಹೇಮಂತ್ ಸೊರೇನ್ ಅವರು ತಮ್ಮ ಪತ್ನಿ ಕಲ್ಪನಾ ಅವರನ್ನೇ ಉತ್ತರಾಧಿಕಾರಿಯಾಗಿ ನೇಮಕ ಮಾಡಲು ಮುಂದಾಗಿದ್ದರು. ಆದರೆ, ಇದೇ ವರ್ಷದ ನವೆಂಬರ್ ನಲ್ಲಿ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ ಕೊನೆಯ ವರ್ಷದಲ್ಲಿ ಉಪಚುನಾವಣೆ ನಡೆಸುವಂತಿಲ್ಲ ಎಂಬ ಕಾರಣಕ್ಕಾಗಿ ಅವರ ಹೇಸರನ್ನು ಕೈಬಿಡಲಾಯಿತು ಎಂದು ತಿಳಿದುಬಂದಿದೆ.

More News

You cannot copy content of this page