ಬೆಂಗಳೂರು (ಫೆ.1):- ರಾಜ್ಯದ ಬರಗಾಲ ಸಮಸ್ಯೆಯ ಪರಿಹಾರಕ್ಕೆ 17 ಸಾವಿರ ಕೋಟಿ ರೂ. ಕೇಳಿದ್ದರು ಕೇಂದ್ರ ಸರ್ಕಾರ ಈವರೆಗೂ ಸ್ಪಂದಿಸಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ನಮ್ಮ ರಾಜ್ಯ ಜಿಎಸ್ಟಿ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ. ಇದರಲ್ಲಿ ನಮಗೆ ಬರಬೇಕಾದ ಪಾಲು ಸಂಪೂರ್ಣವಾಗಿ ಸಿಕ್ಕಿಲ್ಲ ಎಂದರು.
ಬೆಂಗಳೂರು ಪ್ರಪಂಚದ ಗಮನ ಸೆಳೆಯುವ ನಗರವಾಗಿದ್ದು, ವೇಗವಾಗಿ ಬೆಳೆಯುತ್ತಿದೆ. ಬಜೆಟ್‌ನಲ್ಲಿ ನಮಗೆ ಕೆಲವು ವಿಶೇಷ ಯೋಜನೆಗಳನ್ನು ನೀಡಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ ಎಂಬ ಕಾರಣವನ್ನೆ ಅಭಿಪ್ರಾಯಕ್ಕೆ ತೆಗೆದುಕೊಳ್ಳದೆ, ರಾಜಕೀಯ ಏನೇ ಇದ್ದರು ಅದೆಲ್ಲವನ್ನು ಬದಿಗಿಟ್ಟು ಅಭಿವೃದ್ಧಿಗೆ ಒತ್ತು ನೀಡಬೇಕು. ಬೆಂಗಳೂರು ದೇಶದ ಕಿರೀಟ ಇದ್ದ ಹಾಗೇ. ಆದುನಿಕ ಜಗತ್ತಿಗೆ ತಂತ್ರಜ್ಞಾನ, ಶಿಕ್ಷಣ ಈ ಎಲ್ಲ ಕ್ಷೇತ್ರದಲ್ಲಿ ಮುಂದಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅನೇಕ ಸಲ ಬೆಂಗಳೂರಿಗೆ ಬಂದು ಹೋಗಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸ್ಯಾಟಲೈಟ್ ಉಡಾವಣೆ ಸಂದರ್ಭದಲ್ಲಿ ಬಂದಾಗ ಬೆಂಗಳೂರು ಮಹಾನಗರವನ್ನು ನೋಡಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡಾದರೂ ಕೆಲಸ ಮಾಡಬೇಕು ಎಂದರು.
ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ನಮ್ಮ ರಾಜ್ಯದಿಂದ ಪ್ರತಿನಿಧಿಸಿದ್ದಾರೆ. ಬಜೆಟ್‌ನಲ್ಲಿ ರಾಜ್ಯಕ್ಕೆ ಹಾಗೂ ಬೆಂಗಳೂರು ನಗರಕ್ಕೆ ಹೊಸದಾಗಿ ವಿಶೇಷ ಯೋಜನೆ ಕೊಡುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ಅಭಿಪ್ರಾಯಪಟ್ಟರು.
ಗೃಹ ಇಲಾಖೆಯಲ್ಲಿ ಆಧುನಿಕರಣ ತರಬೇಕಿದೆ. ಸೈಬರ್ ಅಪರಾಧ ಪ್ರಕರಣಗಳು ದಿನೆದಿನೇ ಹೆಚ್ಚುತ್ತಿವೆ. ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದ ನಗರವಾಗಿ ಬೆಳೆದು ನಿಂತಿದೆ. ವಿಶೇಷವಾಗಿ ಸೈಬರ್ ಕ್ರೈಂ ಸೆಂಟರ್ ಅಥವಾ ಸೈಬರ್ ಯೂನಿವರ್ಸಿಟಿ ನೀಡಿದರೆ ಅನುಕೂಲವಾಗಲಿದೆ ಎಂದು ಹೇಳಿದರು.
ನಮ್ಮ ಪಕ್ಷವು ಐದು ಗ್ಯಾರಂಟಿ ಯೋಜನೆಗಳ ಭರವಸೆ ಕೊಟ್ಟಿತ್ತು. ಎಲ್ಲವನ್ನು ಅನುಷ್ಠಾನ ಮಾಡಿದ್ದೇವೆ. ಕಳೆದ ಬಾರಿ 8 ತಿಂಗಳಿಗೆ 36 ಸಾವಿರ ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ 12 ತಿಂಗಳಿಗೆ ನಮ್ಮ ಅಂದಾಜಿನ ಪ್ರಕಾರ 58 ಸಾವಿರ ಕೋಟಿ ರೂ. ಖರ್ಚಾಗಲಿದೆ ಎಂದರು.
ಸೋನಿಯಾ ಗಾಂಧಿ ಅವರು ರಾಜ್ಯದಿಂದ ಪ್ರತಿನಿಧಿಸುತ್ತಿರುವ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯಸಭೆಗೆ ಅಭ್ಯರ್ಥಿಗಳ ಆಯ್ಕೆ ತೀರ್ಮಾನವನ್ನು ಸಾಮಾನ್ಯವಾಗಿ ರಾಜ್ಯದಿಂದ ಮಾಡುವುದಿಲ್ಲ. ಕೆಪಿಸಿಸಿ ಅಧ್ಯಕ್ಷರಾಗಲಿ ಅಥವಾ ಮುಖ್ಯಮಂತ್ರಿಯಾಗಲಿ ಮಾಡುವುದಿಲ್ಲ. ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಈ ಹಿಂದಿನಿಂದಲೂ ಇದೇರೀತಿಯಾಗಿ ನಡೆದುಕೊಂಡು ಬರಲಾಗಿದೆ. ರಾಷ್ಟ್ರೀಯ ವರಿಷ್ಟರು ಯಾರನ್ನು ಎಲ್ಲಿಂದ ಪ್ರತಿನಿಧಿಸಲು ಸೂಚಿಸುತ್ತಾರೋ ಅವರಿಗೆ ಬಿಟ್ಟಿದ್ದು. ಸೋನಿಯಾ ಗಾಂಧಿ ಅವರು ಕರ್ನಾಟಕದಿಂದ ಪ್ರತಿನಿಧಿಸಿದರೆ ಸಂತೋಷದ ವಿಚಾರ ಎಂದು ಹೇಳಿದರು.
ಅಂತರ್ ಜಿಲ್ಲಾ ವರ್ಗಾವಣೆ:-
ಪೊಲೀಸ್ ದಂಪತಿಗಳ ಅಂತರ್ ಜಿಲ್ಲಾ ವರ್ಗಾವಣೆಗೆ ಕೆಲ ನಿಯಮಗಳನ್ನು ಮಾಡಬೇಕು. ಈಗಿರುವ ನಿಯಮಗಳಲ್ಲಿ ಕಠಿಣವಾಗಿದ್ದು, ಅದನ್ನು ಸಡಿಲಗೊಳಿಸಬೇಕಿದೆ. ಪತಿ-ಪತ್ನಿಯರು, ಉತ್ತರ ಕರ್ನಾಟಕ ಭಾಗದವರು ಎಂಟತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಸ್ವಾಭಾವಿಕವಾಗಿ ಅವರಿಗೆ ತಮ್ಮ ಊರುಗಳ ಕಡೆ ಕೆಲಸ ಮಾಡಬೇಕೆಂಬ ಆಸೆ ಇರುತ್ತದೆ. ಪ್ರಾವಿಸನ್ ಹೇಗೆ ಮಾಡಬೇಕು ಎಂಬುದನ್ನು ಕಾನೂನಿನಲ್ಲಿ ನಿಯಮಗಳನ್ನು ತಿದ್ದುಪಡಿ ಮಾಡುತ್ತೇವೆ ಎಂದರು.
ಜಾತಿಗಣತಿ ತೆಗೆದುಕೊಳ್ಳಲಿ ನೋಡುತ್ತೇವೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಧಮ್ಕಿ ಹಾಕಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಾಕತ್, ಧಮ್ಕಿಗಳನ್ನು ಪ್ರತಿನಿತ್ಯ ರಾಜಕಾರಣದಲ್ಲಿ ಕೇಳುತ್ತಿರುತ್ತೇವೆ. 168 ಕೋಟಿ ರೂ. ಖರ್ಚು ಮಾಡಿ ಜಾತಿಗಣತಿ ವರದಿ ಸಿದ್ಧಪಡಿಸಲಾಗುತ್ತಿದೆ. ಧಮ್ಕಿ ಹಾಕಿದರೆ ವರದಿ ತೆಗೆದುಕೊಳ್ಳುವುದನ್ನು ನಿಲ್ಲಿಸಿಬಿಡ್ತಾರ. ವರದಿ ಸಿದ್ಧಪಡಿಸುವ ಕಾರ್ಯ ಕೊನೆ ಹಂತದಲ್ಲಿರುವುದರಿಂದ ಆಯೋಗ ಕಾಲಾವಕಾಶ ಕೇಳಿರಬಹುದು. ಹೀಗಾಗಿ ಮುಖ್ಯಮಂತ್ರಿಯವರು ಆಯೋಗಕ್ಕೆ ಸಮಯ ನೀಡಿದ್ದಾರೆ ಎಂದರು.