ಬೆಂಗಳೂರು : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ದಕ್ಷಿಮ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಅವರು, ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರದ ಸ್ಥಾನಮಾನ ನೀಡಬೇಕು ಎಂಬ ಕೂಗು ಎತ್ತಿದ್ದಾರೆ. ಈ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಕೇಂದ್ರ ಬಜೆಟ್ ಸಂಬಂಧ ಇಂದು ಪ್ರತಿಕ್ರಿಯೆ ನೀಡಿದ ಅವರು, ದಕ್ಷಿಮ ಭಾರತದ ತೆರಿಗೆ ಹಣವನ್ನು ಉತ್ತರ ಭಾರತಕ್ಕೆ ಹಂಚಿಕೆ ಮಾಡಲಾಗುತ್ತಿದೆ. ಇದರಿಂದ ನಮಗೆ ಆರ್ಥಿಕವಾಗಿ ಅನ್ಯಾಯವಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ರಾಜ್ಯದ ಹಣ ನಮಗೇ ಹಂಚಿಕೆಯಾಗಬೇಕಾದರೆ ಪ್ರತ್ಯೇಕ ರಾಷ್ಟ್ರದ ಕೂಗು ಅನಿವಾರ್ಯವಾಗಿದೆ, ಮುಂಬರುವ ದಿನಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳು ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಲಿವೆ ಎಂದು ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಪ್ರತಿಪಾದಿಸಿದರು.
ಈ ಕೂಗು ಏಳುವ ಮುನ್ನವೇ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕು, ದಕ್ಷಿಣ ಭಾರತದ ತೆರಿಗೆ ಹಣವನ್ನು ದಕ್ಷಿಣ ಭಾರತಕ್ಕೆ ಖರ್ಚು ಮಾಡಬೇಕು ಎಂದು ಡಿ ಕೆ ಸುರೇಶ್ ಆಗ್ರಹಿಸಿದರು.