ಬೆಂಗಳೂರು : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ತಮ್ಮ ಮಗ ಅಲೋಕ್ಗೂ ಲೋಕಸಭೆ ಟಿಕೆಟ್ ಬಯಸಿರೋ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯಿಂದನ ನಾನೇ ಸ್ಪರ್ಧಿಸುತ್ತೇನೆ ಎಂಬ ಮಾಜಿ ಶಾಸಕ ಕೆ ಸುಧಾಕರ್ ಹೇಳಿಕೆಗೆ ಟಾಂಗ್ ನೀಡಿದರು.
ನಿನ್ನೆ ನಮ್ಮ ಪಕ್ಷದ, ಮಾಜಿ ಸಚಿವ ಸುಧಾಕರ್ ಹೇಳಿಕೆ ನೀಡಿದ್ದಾರೆ, ನಾನು ಮಾಧ್ಯಮದ ಮೂಲಕ ನೋಡಿದೆ, ಜೆಡಿಎಸ್ ವರಿಷ್ಠರಾದ ದೇವೇಗೌಡರು ಹಾಗೂ ಕುಮಾರಸ್ವಾಮಿ ಹೇಳಿದ್ದಾರೆ, ಅದಕ್ಕಾಗಿ ದೇವಮೂಲೆಯಿಂದ ಪೂಜೆ ಆರಂಭಿಸಿ ಪ್ರಚಾರ ಮಾಡ್ತಿದ್ದೀನಿ ಅಂತ. ಈವರೆಗೂ ಬಿಜೆಪಿಯಿಂದ ಯಾವುದೇ ಅಭ್ಯರ್ಥಿ ಹೆಸರು ಅಧಿಕೃತವಾಗಿ ಘೋಷಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಷ್ಟ್ರೀಯ ಪಾರ್ಲಿಮೆಂಟರಿ ಬೋರ್ಡ್ ನಲ್ಲಿ ಪಕ್ಷದ ಅಭ್ಯರ್ಥಿಯ ಕುರಿತು ನಿರ್ಧಾರವಾಗಲಿದೆ. ಸುಧಾಕರ್ ಅವರು ಕಾಂಗ್ರೆಸ್ ಇಂದ ಹೊಸದಾಗಿ ಬಂದಿರೋದ್ರಿಂದ ಅವರಿಗೆ ಈ ವಿಚಾರ ತಿಳಿದಿಲ್ಲ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ನಮ್ಮಲ್ಲಿನ ಕೆಲವು ಸಿಸ್ಟಮ್ಸಗಳನ್ನು ತಿಳಿದುಕೊಳ್ಳಬೇಕಿದೆ, ಯಾವುದೇ ಸಣ್ಣ ಚುನಾವಣೆ ಆದ್ರೂ ಹೈಕಮಾಂಡ್ ನಿರ್ಧಾರ ಮಾಡಬೇಕು. ನನ್ನ ಮಗ ಅಲೋಕ್ ಕೂಡ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಆಕಾಂಕ್ಷಿ, ನಾನೇ ಅಭ್ಯರ್ಥಿ ಅಂತ ಹೇಳಿಲ್ಲ. ವರಿಷ್ಠರ ತೀರ್ಮಾನ ಅಂತ ಹೇಳಲಾಗಿದೆ ಎಂದರು.
ಕೊನೆಯಲ್ಲಿ ಯಾರಿಗೇ ಟೀಕೆಟ್ ಕೊಟ್ರು ಕೆಲಸ ಮಾಡಿ, ಗೆಲ್ಲಿಸೋಣ ಅಂತ ಹೇಳಿದ್ದೇವೆ, ಕ್ಷೇತ್ರದ ಜನತೆಯಲ್ಲಿ ಗೊಂದಲ ಆಗೋದು ಬೇಡ. ಕೇಂದ್ರದಲ್ಲೇ ನಿರ್ಧಾರ ಆಗಿರೋದ್ರಿಂದ ನಾನೇ ಅಭ್ಯರ್ಥಿ ಅಂತ ಹೇಳೋದು ಸರಿಯಲ್ಲ ಎಂದು ಸುಧಾಕರ್ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು.
ಜೆಡಿಎಸ್-ಬಿಜೆಪಿ ಮೈತ್ರಿ ಆಗಿರೋದ್ರಿಂದ ಯಾರಿಗೆ ಟಿಕೆಟ್ ಅನ್ನೋದು ಫೈನಲ್ ಆಗಿಲ್ಲ, ಫೈನಲ್ ಆಗೋವರೆಗೂ ಮಾತಾಡೋದು ಬೇಡ ಎಂದು ಅವರಿಗೆ ವಿಶ್ವನಾಥ್ ಕಿವಿಮಾತು ಹೇಳಿದರು.