UP Budget Session 2024 : ಉತ್ತರ ಪ್ರದೇಶ ಬಜೆಟ್ : 2025ರ ಮಹಾಕುಂಭ ಮೇಳಕ್ಕೆ ₹100 ಕೋಟಿ ಮೀಸಲು..!

ಲಕ್ನೋ: ನವದೆಹಲಿ : ಫೆ. 05 : ಉತ್ತರ ಪ್ರದೇಶ ಸರ್ಕಾರ ಸೋಮವಾರ 2024-25ನೇ ಸಾಲಿನ 7.36 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸಿದ್ದು, ಮೂಲಸೌಕರ್ಯ ಅಭಿವೃದ್ಧಿ ಮತ್ತು ಮಹಿಳೆಯರು, ಯುವಕರು ಮತ್ತು ರೈತರ ಕಲ್ಯಾಣಕ್ಕೆ ಆದ್ಯತೆ ನೀಡಿದೆ. ರಾಜ್ಯದ ಕೃಷಿ ಕ್ಷೇತ್ರಕ್ಕೆ ಶೇ 5.1ರಷ್ಟು ಬೆಳವಣಿಗೆಯ ಗುರಿಯನ್ನು ಬಜೆಟ್ ನಿಗದಿಪಡಿಸಿದ್ದು, ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್, ಸ್ಮಾರ್ಟ್ ಫೋನ್​ ವಿತರಣೆಗೆ 4,000 ಕೋಟಿ ರೂ., ‘ಧರ್ಮಾರ್ಥಮಾರ್ಗ’ (ಧಾರ್ಮಿಕ ಸ್ಥಳಗಳಿಗೆ ರಸ್ತೆಗಳು) ಅಭಿವೃದ್ಧಿಗೆ 1,750 ಕೋಟಿ ರೂ. ಮೀಸಲಿಡಲಾಗಿದೆ. ಮಹಾಕುಂಭ-2025ರ ಆಯೋಜನೆಗಾಗಿ ರಾಜ್ಯದ ಸಂಸ್ಕೃತಿ ಇಲಾಖೆಗೆ 100 ಕೋಟಿ ರೂ. ನೀಡಲಾಗಿದೆ. ನಗರಗಳಲ್ಲಿ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ನಗರಾಭಿವೃದ್ಧಿ ಇಲಾಖೆಗೆ ಹೆಚ್ಚುವರಿಯಾಗಿ 2,500 ಕೋಟಿ ರೂ. ಮೀಸಲಿಡಲಾಗಿದೆ. ರಾಜ್ಯದ ನೀತಿಗಳು ವಿಶೇಷವಾಗಿ ಯುವಕರು, ಮಹಿಳೆಯರು, ರೈತರು ಮತ್ತು ದೀನದಲಿತ ವರ್ಗಗಳ ಉನ್ನತಿಗೆ ಸಮರ್ಪಿತವಾಗಿವೆ ಎಂದು ಸರ್ಕಾರ ಹೇಳಿದೆ.

ಕೃಷಿ ವಲಯದಲ್ಲಿ ಶೇ.5.1ರಷ್ಟು ಬೆಳವಣಿಗೆಯನ್ನು ಸಾಧಿಸುವ ಗುರಿಯೊಂದಿಗೆ, ಮೂರು ಹೊಸ ಕೃಷಿ ಸಂಬಂಧಿತ ಯೋಜನೆಗಳಿಗೆ 460 ಕೋಟಿ ರೂ., ರೈತರ ಖಾಸಗಿ ಕೊಳವೆ ಬಾವಿಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಒದಗಿಸಲು 2,400 ಕೋಟಿ ರೂ. ನಿಗದಿಪಡಿಸಲಾಗಿದೆ. ಈ ಮೊತ್ತವು ಪ್ರಸಕ್ತ ಹಣಕಾಸು ವರ್ಷದಲ್ಲಿ ಒದಗಿಸಲಾದ ಹಣಕಾಸಿಗಿಂತ ಶೇ.25ರಷ್ಟು ಹೆಚ್ಚಾಗಿದೆ.

ಪಿಎಂ ಕುಸುಮ್ ಯೋಜನೆ ಅನುಷ್ಠಾನಕ್ಕಾಗಿ 449.45 ಕೋಟಿ ರೂ.ಗಳನ್ನು ಪ್ರಸ್ತಾಪಿಸಲಾಗಿದೆ. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಹಂಚಿಕೆಗಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಖನ್ನಾ ಹೇಳಿದರು. ಕೇಂದ್ರ ಸರ್ಕಾರದ ಗ್ರಾಮೀಣ ಉದ್ಯೋಗ ಖಾತರಿ ಕಾರ್ಯಕ್ರಮ ಎಂಜಿಎನ್ಆರ್​ಇಜಿಎ ಅಡಿಯಲ್ಲಿ, ರಾಜ್ಯವು 28.68 ಕೋಟಿ ಮಾನವ ದಿನಗಳನ್ನು ಸೃಷ್ಟಿಸಿದೆ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ 75,24,000 ಕಾರ್ಮಿಕರಿಗೆ ಉದ್ಯೋಗ ಒದಗಿಸಿದೆ. 2024-2025ರ ಆರ್ಥಿಕ ವರ್ಷದಲ್ಲಿ 33 ಕೋಟಿ ಮಾನವ ದಿನಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಸಚಿವ ಸುರೇಶ ಕುಮಾರ ಖನ್ನಾ ತಮ್ಮ ಬಜೆಟ್‌ ಭಾಷಣದಲ್ಲಿ ಹೇಳಿದರು.

ಈ ವರ್ಷದ ಬಜೆಟ್​ನಲ್ಲಿ ಗಂಗಾ ಎಕ್ಸ್ ಪ್ರೆಸ್ ವೇ ಯೋಜನೆಗೆ 2,057 ಕೋಟಿ ರೂ.ಗಳನ್ನು ಪ್ರಸ್ತಾಪಿಸಲಾಗಿದೆ. ಇದು ಪ್ರಸಕ್ತ ವರ್ಷಕ್ಕೆ ಹೋಲಿಸಿದರೆ ದ್ವಿಗುಣಗೊಂಡಿದೆ. ಆಗ್ರಾ-ಲಕ್ನೋ ಎಕ್ಸ್​ಪ್ರೆಸ್ ವೇ ಮತ್ತು ಪೂರ್ವಾಂಚಲ್ ಎಕ್ಸ್​ಪ್ರೆಸ್ ವೇಯನ್ನು ಸಂಪರ್ಕಿಸಲು ಹೊಸ ಲಿಂಕ್ ಎಕ್ಸ್​ಪ್ರೆಸ್ ವೇ ನಿರ್ಮಾಣಕ್ಕೆ 500 ಕೋಟಿ ರೂ. ನೀಡಲಾಗಿದೆ.

ಅಯೋಧ್ಯೆಯಲ್ಲಿ ‘ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯೆ ಧಾಮ್’ ವಿಸ್ತರಣೆಗೆ 150 ಕೋಟಿ ರೂ.ಗಳ ಪ್ರಸ್ತಾಪ ಮಾಡಲಾಗಿದೆ. ಬೇಸಿಗೆಯಲ್ಲಿ ನಿರಂತರ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು 2,000 ಕೋಟಿ ರೂ.ಗಳ ಹೆಚ್ಚುವರಿ ಹಂಚಿಕೆಯನ್ನು ಬಜೆಟ್ ಪ್ರಸ್ತಾಪಿಸಿದೆ. ಇದು ಪ್ರಸಕ್ತ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ.33ರಷ್ಟು ಹೆಚ್ಚಾಗಿದೆ.

More News

You cannot copy content of this page