ಮೈಸೂರು : ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರು ನಂಜನಗೂಡಿನ ಸುತ್ತೂರು ಕ್ಷೇತ್ರದಲ್ಲಿ ನಿರ್ಮಿಸಿರುವ ಅತಿಥಿಗೃಹದ ಉದ್ಘಾಟನೆಯನ್ನು ಕೇಂದ್ರ ಸಚಿವ ಅಮಿತ್ ಶಾ ಮಾಡಲಿದ್ದಾರೆ. ಇದೀಗ ಈ ಕಾರ್ಯಕ್ರಮದಿಂದ ಏನಾದರೂ ರಾಜಕೀಯ ಲೆಕ್ಕಾಚಾರ ಇದೆಯಾ ಎನ್ನುವುದರ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ ಅಲ್ಲದೆ, ಕುತೂಹಲಕ್ಕೂ ಎಡೆ ಮಾಡಿಕೊಟ್ಟಿದೆ.
ಎರಡು ದಿನಗಳ ಭೇಟಿಗಾಗಿ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮಿಸಲಿದ್ದಾರೆ. ಫೆಬ್ರವರಿ ಹತ್ತರಂದು ಸಂಜೆ ಸುತ್ತೂರಿನಲ್ಲಿ ಶ್ರೀಮತಿ ಪಾರ್ವತಮ್ಮ ಹಾಗೂ ಡಾ,. ಶಾಮನೂರು ಶಿವಶಂಕರಪ್ಪ ಅತಿಥಿಗೃಹವನ್ನು ಉದ್ಘಾಟಿಸಲಿದ್ದಾರೆ. ಮರುದಿನ ದಾವಣಗೆರೆಯ ಕಾರ್ಯಕ್ರಮವೊಂದರಲ್ಲಿ ಅಮಿತ್ ಷಾ ಭಾಗವಹಿಸಲಿದ್ದಾರೆ.

ಇವೆಲ್ಲಾ ನೋಡಿದರೆ, ಕಾಂಗ್ರೆಸ್ಸಿನ ಅಜಿತ್ ಪವಾರ್ ಒಬ್ಬರು ಬಿಜೆಪಿಗೆ ಸೇರಲಿದ್ದಾರೆ ಎಂದು ಆಗಾಗ್ಗೆ ಹೇಳುತ್ತಿದ್ದುದು ಶಾಮನೂರು ಅವರನ್ನೇ ಅನ್ನೋ ಅನುಮಾನ ಕಾಡತೊಡಗಿದೆ. ಈಗಾಗಲೇ ಕಾಂಗ್ರೆಸ್ಸಿನಿಂದ ಮುನಿಸಿಕೊಂಡಿರುವ ಅವರು, ಬಿಜೆಪಿ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಇತ್ತೀಚೆಗೆ ಲಿಂಗಾಯುತ ಸಭೆಯಲ್ಲಿ ಬಿಜೆಪಿಯ ಬಿ ವೈ ರಾಘವೇಂದ್ರ ಅವರನ್ನು ಬೆಂಬಲಿಸಲು ಕರೆ ಕೊಟ್ಟಿದ್ದರು. ಅದೇ ರೀತಿಯಲ್ಲಿ ಇದೀಗ ಅವರು ಕಟ್ಟಿಸಿರುವ ಅತಿಥಿಗೃಹವನ್ನು ಅಮಿತ್ ಶಾ ಉದ್ಘಾಟಿಸುತ್ತಿರುವುದು ನೋಡಿದರೆ, ಅವರು ಬಿಜೆಪಿ ಸೇರಲಿದ್ದಾರಾ ಎಂಬ ಅನುಮಾನ ರಾಜಕೀಯ ವಲಯದಲ್ಲಿ ಕಾಡುತ್ತಿದೆ.
ಇನ್ನೊಂದೆಡೆ ಇತ್ತೀಚೆಗೆ ಕಾಂಗ್ರೆಸ್ ಗೆ ಕೈ ಕೊಟ್ಟು ಮತ್ತೆ ಬಿಜೆಪಿಗೆ ಹಾರಿದ ಜಗದೀಶ್ ಶೆಟ್ಟರ್ ಅವರೂ ಕೂಡ ಶಾಮನೂರು ಅವರು ಸಂಬಂಧಿಕರಾಗಿದ್ದಾರೆ. ಇವರಿಂದ ಶಾಮನೂರು ಅವರಿಗೆ ಗಾಳ ಹಾಕಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ,

ಹಾಗೆಯೇ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಮತ್ತು ಶಾಸಕ ಜನಾರ್ಧನ ರೆಡ್ಡಿ ಅವರನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ. ಒಂದು ವೇಳೆ ಶಾಮನೂರು ಅವರನ್ನು ಕಾಂಗ್ರೆಸ್ ನಿಂದ ಸೆಳೆಯಲು ಯಶಸ್ವಿಯಾದರೆ, ಮಧ್ಯ ಕರ್ನಾಟಕ ಭಾಗದಲ್ಲಿ ದೊಡ್ಡ ಹಿನ್ನೆಡೆ ಅನುಭವಿಸಬೇಕಾಗಬಹುದು ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರ.
ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನಡೆಯುತ್ತಿರುವ ಬೆಳವಣಿಗೆಗಳು ಮಾತ್ರ ಊಹಿಸಲೂ ಸಾಧ್ಯವಾಗದ ರೀತಿಯಲ್ಲಿವೆ. ಅನೇಕರು ಟೀಕೆಟ್ ಗಾಗಿ ಹೈಕಮಾಂಡ್ ಬಳಿ ಲಾಭಿ ನಡೆಸುತ್ತಿದ್ದರೆ, ಇನ್ನು ಅನೇಕರು, ಯಾರು ಯಾವ ಪಕ್ಷಕ್ಕೆ ತೆರಳಿದರೆ ಲಾಭ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.