ಬೆಂಗಳೂರು : ಬೆಳಗ್ಗೆ 9 ಗಂಟೆಗೆ ವಿಧಾನಸಭೆ ಕಾರ್ಯಕಲಾಪ ಆರಂಭಿಸುವುದಕ್ಕೆ ವಿಧಾನಸಭೆ ಕಾರ್ಯ ಕಲಾಪ ಸಲಹಾ ಸಮಿತಿ (ಬಿಎಸಿ)ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು.
ವಿಧಾನಸಭೆ ಕಲಾಪವನ್ನು ಬೆಳಗ್ಗೆ 9 ಗಂಟೆಗೆ ಆರಂಭಿಸಲು ಸ್ಪೀಕರ್ ಯು.ಟಿ.ಖಾದರ್ ನಿರ್ಧರಿಸಿದ್ದರು.ಇದಕ್ಕಾಗಿ ಬೆಳಗ್ಗೆ 8 ಗಂಟೆಯಿಂದ 9 ಗಂಟೆವರೆಗೆ ಶಾಸಕರಿಗೆ ಉಚಿತ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಸಕಾಲಕ್ಕೆ ಶಾಸಕರು ಕಲಾಪಕ್ಕೆ ಬರುವ ನಿಟ್ಟಿನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಪೀಕರ್ ತಿಳಿಸಿದ್ದರು.ಬೆಳಗ್ಗೆ ಬೇಗ ಕಲಾಪ ಆರಂಭಿಸಿದರೆ ಸದಸ್ಯರುಗಳಿಗೆ ಚರ್ಚೆಗೆ ಹೆಚ್ಚಿನ ಅವಕಾಶ ಸಿಗಲಿದೆ ಎಂಬ ಉದ್ದೇಶದೊಂದಿಗೆ ಬೆಳಗ್ಗೆ 9 ಗಂಟೆಗೆ ಕಲಾಪ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದರು.

ಆದರೆ,ಇಂದು ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಬೆಳಗ್ಗೆ 9 ಗಂಟೆಗೆ ಕಲಾಪ ಆರಂಭಿಸುವುದಕ್ಕೆ ಆಕ್ಷೇಪ ವ್ಯಕ್ತವಾಯಿತು.ಬೆಳಗ್ಗೆ ಒಂಬತ್ತು ಗಂಟೆಗೆ ಕಲಾಪಕ್ಕೆ ಹಾಜರಾಗುವುದು ಕಷ್ಟ ಸಾಧ್ಯವಾಗುತ್ತೆ. ಅಷ್ಟು ಬೆಳಗ್ಗೆ ಬರಲು ಆಗುವುದಿಲ್ಲ.ಹೀಗಾಗಿ 10 ಗಂಟೆ ಬಳಿಕ ಕಲಾಪ ಆರಂಭಿಸುವಂತೆ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ವಿಪ್ ಗಳು ಮನವಿ ಮಾಡಿದರು.
ಎಲ್ಲರೂ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಕಲಾಪವನ್ನು 10 ಗಂಟೆಗೆ ಆರಂಭಿಸಲು ಕಾರ್ಯ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿ ಸಲಾಯಿತು.
ಬುಧವಾರದಿಂದ ಕಲಾಪವನ್ನು 10 ಗಂಟೆಗೆ ಆರಂಭಿಸಲು ಬಿಎಸಿ ಸಭೆಯಲ್ಲಿ ನಿರ್ಧರಿಸಲಾಯಿತು.