ರಾಯಚೂರು : ದೇವದುರ್ಗ ಪಟ್ಟಣದ ಪೊಲೀಸ್ ಠಾಣೆಯ ಕರ್ತವ್ಯ ನಿರತ ಹೆಡ್ ಕಾನ್ ಸ್ಟೇಬಲ್ ಮೇಲೆ ಜೆಡಿಎಸ್ ಶಾಸಕಿ ಕರೆಮ್ಮ ಜೆ. ನಾಯಕ ಅವರ ಪುತ್ರ ಸಂತೋಷ್, ಸಹೋದರ ತಿಮ್ಮರೆಡ್ಡಿ ಹಾಗೂ ಆಪ್ತ ಸಹಾಯಕ ಇಲಿಯಾನ್ ಸೇರಿದಂತೆ 15ಕ್ಕೂ ಜೆಡಿಎಸ್ ಕಾರ್ಯಕರ್ತರಿಂದ ಹಲ್ಲೆ ನಡೆಸಿದ್ದಾರೆ ಎಂದು ಹೆಡ್ ಕಾನ್ ಸ್ಟೇಬಲ್ ಹನುಮಂತರಾಯ ಅವರು ಆರೋಪಿಸಿದ್ದಾರೆ.
ಗಾಯಗೊಂಡಿರುವ ಹನುಮಂತರಾಯ ಅವರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಕ್ರಮ ಮರಳುಗಾರಿಕೆಯನ್ನು ತಡೆದಿದ್ದಕ್ಕೆ ಈ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಶನಿವಾರ ದೇವದುರ್ಗ ತಾಲೂಕಿನ ದೊಂಡಂಬಳಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜೆಡಿಎಸ್ ಕಾರ್ಯಕರ್ತರ ಟ್ರ್ಯಾಕ್ಟರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ಶಾಸಕಿ ಕರೆಮ್ಮ ಅವರ ಪುತ್ರ ಹಾಗೂ ಆಪ್ತ ಸಹಾಯಕ ಪ್ರವಾಸಿ ಮಂದಿರಕ್ಕೆ ಬರುವಂತೆ ಕರೆ ಮಾಡಿದ್ದರು.
ಪ್ರವಾಸಿ ಮಂದಿರಕ್ಕೆ ಹೋದಾಗ ಅವರು ಹಲ್ಲೆ ನಡೆಸಿದ್ದಾರೆ ಎಂದು ಹನುಮಂತರಾಯ ಅವರು ಆರೋಪಿಸಿದ್ದಾರೆ. ೀ ಹಿಂದೆ ಅಕ್ರಮ ಮರಳುಗಾರಿಕೆ ವಿರುದ್ಧ ಶಾಸಕಿ ಕರೆಮ್ಮ ಅವರು ಕಟ್ಟು ನಿಟ್ಟನ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದರು. ಆದರೆ ಇದೀಗ ಅಕ್ರಮ ಮರಳುಗಾರಿಕೆಗೆ ಪುತ್ರನ ಮೂಲಕ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.