ಬೆಂಗಳೂರು : ದೆಹಲಿಯಲ್ಲಿ ನಡೆಯುತ್ತಿರುವ ದೆಹಲಿ ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ರೈತರನ್ನು ಕೂಡಲೇ ಬಿಡುಗಡಜೆ ಮಾಡುವಂತೆ ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಅವರಿಗೆ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದು ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ರಾಜ್ಯದ ರೈತರನ್ನು ಮಧ್ಯಪ್ರದೇಶ ಸರ್ಕಾರ ಬಂಧಿಸಿ ಜೈಲಿನಲ್ಲಿ ಇಟ್ಟಿರುವುದು ಸಂವಿಧಾನ ಬಾಹಿರ ಕ್ರಮ.
— CM of Karnataka (@CMofKarnataka) February 15, 2024
ನಾಡಿನ ರೈತರನ್ನು ಈ ಕೂಡಲೆ ಬಿಡುಗಡೆ ಮಾಡಬೇಕು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಗೆ ಈ ಮೂಲಕ ಒತ್ತಾಯಿಸುತ್ತಿದ್ದೇನೆ.
– ಮುಖ್ಯಮಂತ್ರಿ… pic.twitter.com/KB9zEzIUxa
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಧ್ಯಪ್ರದೇಶ ಸಿಎಂ ಅವರಿಗೆ ಬರೆದ ಪತ್ರವನ್ನು ಅಪ್ ಲೋಡ್ ಮಾಡಿದ್ದಾರೆ. ಹಾಗೆಯೇ ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ರಾಜ್ಯದ ರೈತರನ್ನು ಮಧ್ಯಪ್ರದೇಶ ಸರ್ಕಾರ ಬಂಧಿಸಿ ಜೈಲಿನಲ್ಲಿ ಇಟ್ಟಿರುವುದು ಸಂವಿಧಾನ ಬಾಹಿರ ಕ್ರಮ.
ನಾಡಿನ ರೈತರನ್ನು ಈ ಕೂಡಲೆ ಬಿಡುಗಡೆ ಮಾಡಬೇಕು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಗೆ ಈ ಮೂಲಕ ಒತ್ತಾಯಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ ದೆಹಲಿಗೆ ರೈತರು ರೈಲಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅವರನ್ನು ಭೋಪಾಲ್ ನಲ್ಲಿ ಯಾವುದೇ ಕಾರಣವಿಲ್ಲದೇ ಬಂಧಿಸಲಾಗಿದೆ. ರೈತರನ್ನು ಬಂಧಿಸಿ ನಾಲ್ಕು ದಿನಗಳು ಕಳೆದರೂ ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಿಮ್ಮ ಪೊಲೀಸ್ ಅಧಿಕಾರಿಗಳು ರೈತರನ್ನು ವಾರಾಣಸಿಗೆ ಸ್ಥಳಾಂತರಿಸುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದವರನ್ನು ಬಂಧಿಸಲಾಗಿದೆ. ಪ್ರತಿಭಟನೆ ಮಾಡುವುದು ರೈತರ ಸಾಂವಿಧಾನಿಕ ಹಕ್ಕು, ಅವರನ್ನು ನಿಮ್ಮಲ್ಲಿನ ಅಧಿಕಾರಿಗಳು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವುದು ದುರದೃಷ್ಟಕರ ಎಂದು ಸಿಎಂ ಪತ್ರದಲ್ಲಿ ತಿಳಿಸಿದ್ದಾರೆ.
ತಾವೇ ಖುದ್ದಾಗಿ ಪರಿಶೀಲನೆ ನಡೆಸಿ ಕರ್ನಾಟಕದ ರೈತರನ್ನು ಬಿಡುಗಡೆ ಮಾಡಬೇಕೆಂದು ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.