ಹುಬ್ಬಳ್ಳಿ: ರಾಮ ಮಂದಿರ ಕಟ್ಟಿರೋದಕ್ಕೆ ನಮ್ಮ ವಿರೋಧವಿಲ್ಲ, ಆದ್ರೆ ರಾಮಮಂದಿರ ಕಟ್ಟಿರೋ ಜಾಗ ಸರಿ ಇಲ್ಲ, ಸುಪ್ರೀಂ ಕೋರ್ಟ್ ಹೇಳಿರೋ ಜಾಗದಲ್ಲಿ ಇವರು ಮಂದಿರ ಕಟ್ಟಿಲ್ಲ, ಬೇರೆ ಜಾಗದಲ್ಲಿ ಕಟ್ಟಿ, ತಮ್ಮ ಸಾಧನೆ ಎಂದು ಬಿಂಬಿಸುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ಕಟ್ಟಿರೋದಕ್ಕೆ ಬಡತನ ನಿರ್ಮೂಲನೆ ಆಗಲ್ಲ. ರಾಮ ಮಂದಿರ ಕಟ್ಟಿರೋದು ಕೇವಲ ರಾಜಕೀಯ ಇಚ್ಛಾಶಕ್ತಿಯಿಂದ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಯೋಧ್ಯೆಯಲ್ಲಿ ದೇಗುಲ ಕೇವಲ ಅದು 40% ಪರ್ಸೆಂಟ್ ಕಟ್ಟಿದಾರೆ, ರಾಮ ಮಂದಿರದಿಂದ ನಿಮ್ಮ ಬಡತನ ನಿರ್ಮೂಲನೆ ಆಗಿದೆಯಾ.? ಆದ್ದರಿಂದ ಅದನ್ನ ಹೇಳಿ ಯಾಕೆ ವೋಟ್ ಕೇಳುತ್ತಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ದೇಶದಲ್ಲಿ ಹತ್ತು ವರ್ಷದಿಂದ ಸರ್ವಾಧಿಕಾರಿ ಧೋರಣೆ ನಡೆತಿದೆ, ಹತ್ತು ವರ್ಷದಲ್ಲಿ ಏನೆ ಉದ್ಘಾಟನೆ ಮಾಡಿದ್ರು ಮೋದಿ ಒಬ್ಬರೇ. ದೇಶ ಹಳ್ಳ ಹಿಡಿದು ಹೋಗಿದೆ, ಹತ್ತು ವರ್ಷದಲ್ಲಿ ಬಡವರಿಗೆ ಅನಕೂಲ ಅಗಿರೋ ಒಂದು ಕಾರ್ಯಕ್ರಮ ಇಲ್ಲ. ಹತ್ತು ವರ್ಷದಲ್ಲಿ ಇವರ ಸಾಧನೆ ಏನೂ.? ಎಂದು ಪ್ರಶ್ನಿಸಿದರು.
ಪೆಟ್ರೋಲ್ ಡಿಸೇಲ್ ರೇಟ್ ಕಡಿಮೆ ಆಗಿದೆಯಾ.? ಚುನಾವಣೆ ಬಂದಾಗ ಒಂದು ಅಜೆಂಡ್ ಸೆಟ್ ಮಾಡ್ತಾರೆ. ಅಧಿಕಾರ ಇದೆ ಎಂದು ದುರುಪಯೋಗ ಮಾಡಬಾರದು. ನೀವು ಪ್ರಭಾವಿಯಾಗಿದ್ರೆ ಟಿವಿ ಆಪ್ ಮಾಡಿ ಬನ್ನಿ. ರಾಮ ರಹೀಮ್, ಪಾಕಿಸ್ತಾನ, ಅಪಘಾನಿಸ್ತಾನ ಹೆಸರು ಮೂಲಕ ಜನರನ್ನು ಹುಚ್ಚು ಹಿಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ ಚುನಾವಣೆಯಲ್ಲಿ ಪುಲ್ವಾಮಾ ದಾಳಿ ಬಗ್ಗೆ ಮಾತಾಡಿದ್ರು. ಹಾಗಿದ್ರೆ RDX ಹೇಗೆ ಬಂತು, ದೇಶದಲ್ಲಿ ಈ ತರಹ ಚರ್ಚೆಗಳೇ ಆಗುತ್ತಿಲ್ಲ. ಕೇವಲ ರಾಮ ಮಂದಿರ, ನಿತೀಶ್ ಕುಮಾರ್, ಕಮಲನಾಥ್ ಎನ್ನುತ್ತಿದ್ದಾರೆ. ಸೋತ ಕಮಲನಾಥ್ ತಗೊಂಡ್ರೀ. ಇವರಿಂದ ಯಾವ ಹಿಂದೂಗೆ ಲಾಭ ಆಗಿಲ್ಲ, ಇದಕ್ಕೆಲ್ಲ ಅಂತ್ಯ ಇದೆ, ದೇವರು ಇದ್ದಾನೆೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಏನೂ ಮಾಡಿಲ್ಲ, ಗ್ಯಾರಂಟಿಗಳನ್ನು ನೋಡಿ ಮತ ಹಾಕಿದ್ರೆ ಬಿಜೆಪಿಯವರು ಗೆಲ್ಲಲ್ಲ. ಗ್ಯಾರಂಟಿ ತಪ್ಪಿಸೋಕೆ ರಾಮ, ರಹೀಮ್ ಬರ್ತಾರೆ ಎಂದ ಅವರು, ಅಭಿವೃದ್ದಿ ವಿಚಾರದ ಮೇಲೆ ಹೋದ್ರೆ ಬಿಜೆಪಿ ಗೆಲ್ಲಲ್ಲ. ಬರೋ 100 ದಿನಗಳಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿ. ಜನರಿಗೆ ಮೋಸ ಮಾಡಿ ವೋಟ್ ತಗೋತಾರೆ ಎಂದರು.
ಲೋಕಸಭೆಗೆ ಸ್ಪರ್ಧಿಸಲು ಮನಸ್ಸಿಲ್ಲ
ನನಗೆ ಲೋಕಸಭೆ ಚುನಾವಣೆಗೆ ನಿಲ್ಲೋಕೆ ಮನಸಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಲೋಕಸಭೆ ಚುನಾವಣೆ ಸ್ಪರ್ಧೆ ಮಾಡೋಕೆ ನನಗೆ ಆಸಕ್ತಿ ಇಲ್ಲ. ಮೋದಿ ಸಾಹೇಬರು ಟಿವಿಯಲ್ಲಿ ಬಾರದೆ ವೋಟ್ ಕೇಳಲಿ ಎಂದು ತಾಕೀತು ಮಾಡಿದರು.
ಈ ದೇಶ ಎಲ್ಲರಿಗೂ ಸೇರಿದ್ದು. ಬಿಜೆಪಿಯವರು ಈ ದೇಶಕ್ಕೆ ಬಿಜೆಪಿಯವರು ಏನೂ ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು, ದೇಶ ಸಾಲದಲ್ಲಿ ಮುಳುಗಿ ಹೋಗಿದೆ. ಮೋದಿ ಸಾಹೇಬರು ಮುಖ್ಯಮಂತ್ರಿ ಇದ್ದಾಗ ಮಾತಾಡಿರೋ ವಿಡಿಯೋ ಇದೆ ಅದನ್ನು ಬಿಜೆಪಿಯವರು ಕೇಳಬೇಕು ಎಂದು ಆಗ್ರಹಿಸಿದರು.
ನಾವು ತೆರಿಗೆ ಕೇಳಿದ್ರೆ ಸುಳ್ಳು ರಾಮಯ್ಯ ಅಂತೀದಾರೆ, ಹೌದು ಸುಳ್ಳು ರಾಮಯ್ಯ ಅಂದ್ರೆ ಹತ್ತು ವರ್ಷದಲ್ಲಿ ಇವರು ಏನೂ ಮಾಡಿದಾರೆ, ಮೇಕ್ ಇನ್ ಇಂಡಿಯಾ, ರೈತರ ಆದಾಯ ದುಪ್ಪಟ್ಟು, ಭಯೋತ್ಪಾದನೆ ನಿರ್ಮೂಲನೆ ಬಗ್ಗೆ ಮಾತಾಡಿದ್ರು. ಇವೆಲ್ಲಾ ಸಾಧ್ಯವಾಗಿದೆಯಾ ಎಂದು ಪ್ರಶ್ನಿಸಿದರು.
ನಿರ್ಮಲಾ ಸೀತಾರಾಮನ್ ಮೂರು ಕೋಟಿ ಮನೆ ನಿರ್ಮಾಣ ಅಂದ್ರೆ, ಮೋದಿ ಅವರು ನಾಲ್ಕು ಕೋಟಿ ಮನೆ ನಿರ್ಮಾಣ ಅಂತಾರೆ, ನರೇಗಾದಲ್ಲಿ ಇವರ ಸಾಧನೆ ಏನೂ, ಕಾಂಟ್ರವರ್ಸಿ ಬಗ್ಗೆ ಮಾತಾಡದೆ, ಅಭಿವೃದ್ಧಿ ಬಗ್ಗೆ ಮಾತಾಡಿ ಮತಪಡೆಯಲಿ ನೋಡೋಣ ಎಂದು ತಾಕೀತು ಮಾಡಿದರು.