ಹುಬ್ಬಳ್ಳಿ: ಕಾಂಗ್ರೆಸ್ ನಾಯಕರು ಅಪ್ರಬುದ್ಧ ಹೇಳಿಕೆ ಯಾಕೆ ನೀಡುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಸಚಿವ ಸಂತೋಷ ಲಾಡ್ ಸುಪ್ರೀಂ ಕೋರ್ಟ್ ಗಿಂತ ಮೇಲಿದ್ದಾರಾ? ಕಾಂಗ್ರೆಸ್ ನಾಯಕರಿಗೆ ಏನಾಗಿದೆ ಅಂತ ಅರ್ಥವಾಗುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂತೋಷ ಲಾಡ್ ಅವರು ರಾಹುಲ್ ಗಾಂಧಿ ಅವರ ತರಹ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಮಮಂದಿರ ಕಟ್ಟಿದ ಜಾಗ ಸರಿ ಇಲ್ಲ, ಸುಪ್ರೀಂಕೋರ್ಟ್ ಹೇಳಿದ ಜಾಗದಲ್ಲಿ ಮಂದಿರ ಕಟ್ಟಿಲ್ಲ ಎಂಬ ಸಚಿವ ಸಂತೋಷ ಲಾಡ್ ಹೇಳಿಕೆಗೆ ಪ್ರಹ್ಲಾದ್ ಜೋಶಿ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಅವರು ಸ್ವಲ್ಪ ಮೆಚ್ಯೂರ್ ಆಗಿ ಮಾತನಾಡಲಿ ಎಂದು ಹೇಳಿದರು.
ಮನುಷ್ಯನಿಗೆ ಶ್ರದ್ಧೆ, ಸ್ವಾಭಿಮಾನ, ಆತ್ಮಾಭಿಮಾನ ಮುಖ್ಯ, ಅಪಮಾನವನ್ನು ಯಾರೂ ಸಹಿಸಲ್ಲ ಎಂದು ಹೇಳಿದ ಜೋಶಿ, ಚರ್ಚ್, ಮಸೀದಿ ಕಟ್ಟುವುದರಿಂದ ಬಡತನ ನಿವಾರಣೆ ಆಗುತ್ತಾ ಎಂದು ಕೇಳಬೇಕಾಗುತ್ತೆ ಎಂದು ಹೇಳಿದರು.
ರಾಷ್ಟ್ರಕವಿ ಕುವೆಂಪು ಅವರಿಗೆ ಮಾಡಿದ ಅಪಮಾನ
ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಬದಲಾವಣೆ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇದು ಅಧಿಕಾರಿಗಳ ಮುಷ್ಠಾಳತನದ ವರ್ತನೆ. ಇದು ಕಾಂಗ್ರೆಸ್ ಸರ್ಕಾರದ ತುಷ್ಟಿಕರಣ ಪರಮಾವಧಿ. ಇದು ರಾಷ್ಟ್ರ ಕವಿ ಕುವೆಂಪು ಅವರಿಗೆ ಮಾಡಿರುವ ಅಪಮಾನ ಎಂದು ಟೀಕಿಸಿದರು.