ಚೆನ್ನೈ : ಅಮೇರಿಕಾಕ್ಕೆ ಹೋಗಿದ್ದೆ,. ಅಲ್ಲಿ ಚಿತ್ರದ ಪ್ರಚಾರ ಕಾರ್ಯವನ್ನು ಮುಗಿಸಿ ವಾಪಸ್ಸಾಗುತ್ತಿದ್ದೇನೆ, ಇನ್ನೆರೆಡು ದಿನಗಳಲ್ಲಿ ಶುಭ ಸುದ್ದಿಯೊಂದಿಗೆ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ನಟ ಹಾಗೂ ಮಕ್ಕಳ್ ನೀಧಿ ಮೈಯಂ ಪಕ್ಷದ ಧುರೀಣ ಕಮಲ್ ಹಾಸನ್ ತಿಳಿಸಿದ್ದಾರೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇದೀಗ ಸುದ್ದಿ ತಂದಿಲ್ಲ, ಉಳಿದವರೆಲ್ಲರ ಜತೆ ಮಾತುಕತೆ ನಡೆಸಿ ಎರಡು ದಿನಗಳಲ್ಲಿ ತಮ್ಮನ್ನು ಭೇಟಿಯಾಗಿ ಸಿಹಿ ಸುದ್ದಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ ಎಲ್ಲಾ ರಾಜಕೀಯ ಪಕ್ಷಗಳು ಭರದ ಸಿದ್ದತೆ ಆರಂಭಿಸಿವೆ. ಅದರಂತೆಯೇ ತಮಿಳುನಾಡಿನಲ್ಲಿ ರಾಜಕೀಯ ಪಕ್ಷಗಳು ಮೈತ್ರಿ ಮತ್ತು ಸೀಟು ಹಂಚಿಕೆ ಕುರಿತು ಮಾತುಕತೆ ನಡೆಸುತ್ತಿವೆ.
ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಕೂಡ ತಮ್ಮ ಪಕ್ಷ ಎಂಎನ್ಎಂ ಅನ್ನು ಡಿಎಂಕೆ ಜತೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಅವರು ಸಿಹಿಸುದ್ದಿಯನ್ನು ಇನ್ನೆರೆಡು ದಿನಗಳಲ್ಲಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಎರಡೂ ಪಕ್ಷಗಳಲ್ಲಿ ಸೀಟು ಹಂಚಿಕೆ ಸಂಬಂಧ ಮಾತುಕತೆಗಳು ನಡೆದಿವೆ. ಇದಕ್ಕೆ ಅಂತಿಮ ಚರ್ಚೆ ನಡೆಯಬೇಕಾಗಿದೆ. ಡಿಎಂಕೆ ನೇತೃತ್ವದ ಮೈತ್ರಿಕೂಟವನ್ನು ಕಮಲ್ ಹಾಸನ್ ಅವರು ಸೇರಿಕೊಳ್ಳಲಿದ್ದಾರೆ ಎಂಬ ಮಾತುಗಳು ಜೋರಾಗಿ ನಡೆಯುತ್ತಿವೆ. ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಘೋಷಣೆಯಾಗಲಿದೆ.
ಕಮಲ್ ಹಾಸನ್ ಒಬ್ಬರೇ ಅವರ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.