ಬೆಂಗಳೂರು : ವಿಶ್ವವಿಖ್ಯಾತ ಮತ್ತು ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವಕ್ಕೆ ದಿನಾಂಕ ನಿಗಧಿಯಾಗಿದೆ. ಏಪ್ರಿಲ್ 15ರಿಂದ ಏಪ್ರಿಲ್ 23 ರವರೆಗೆ ಬೆಂಗಳೂರು ಕರಗ ಮಹೋತ್ಸವ ನಡೆಯಲಿದ್ದು, ಏಪ್ರಿಲ್ 23 ರ ಚೈತ್ರ ಪೂರ್ಣಮಿಯ ದಿನದಂದು ಕರಕ ಮೆರವಣಿಗೆ ನಡೆಯಲಿದೆ.
ಈ ಸಂಬಂಧ ಧರ್ಮರಾಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಹಾಗೂ ಮುಜರಾಯಿ ಇಲಾಖೆ ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಎ ಜ್ಞಾನೇಂದ್ರ ಸ್ವಾಮಿ ಅವರೇ ಈ ಬಾರಿ ಕರಗ ಹೊರಲು ಆಯ್ಕೆ ಮಾಡಲಾಗಿದೆ.

ಕಳೆದ ವರ್ಷ ಕರಗ ಮೆರವಣಿಗೆ ಸಂದರ್ಭದಲ್ಲಿ ಕೆಲವು ಕೆಡಿಗೇಡಿಗಳು ಕರಗದ ಪೂಜಾರಿ ಎ ಜ್ಞಾನೇಂದ್ರ ಅವರ ಮೇಲೆ ಕೆಮಿಕಲ್ ಎರಚಿ ಕರಗಕ್ಕೆ ಅಡ್ಡಿಪಡಿಸಲು ಮುಂದಾಗಿದ್ದರು. ಆದರೆ, ಪೂಜಾರಿ ಜ್ಞಾನೇಂದ್ರ ಅವರು ಯಶಸ್ವಿಯಾಗಿ ದ್ರೌಪದಿದೇವಿ ಕರಗವನ್ನು ರಾಜಬೀದಿಯಲ್ಲಿ ಉತ್ಸವ ಮುಗಿಸಿ ಧರ್ಮರಾಯ ಸ್ವಾಮಿ ದೇವಾಲಯಕ್ಕೆ ತಲುಪಿಸಿದ್ದರು.