ಹುಬ್ಬಳ್ಳಿ: ಕುವೆಂಪು ಅವರಿಗೆ ಮಾತ್ರವಲ್ಲ ಯಾರಿಗೂ ಕೂಡ ಅವಮಾನ ಮಾಡುವ ಕೆಲಸವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುವುದಿಲ್ಲ. ಬಿಜೆಪಿಯವರು ಅಭಿವೃದ್ಧಿ ಬಗ್ಗೆ ಮಾತನಾಡುವುದನ್ನು ಬಿಟ್ಟು ಇಂತಹ ವಾಕ್ಯ ಬದಲಾವಣೆ ಬಗ್ಗೆ ಮಾತನಾಡುವ ಮೂಲಕ ಜನರ ದಾರಿ ತಪ್ಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಶಿವಾಜಿ ಮಹಾರಾಜರು ಜಯಂತಿ ಅಂಗವಾಗಿ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬಿಜೆಪಿಯವರು ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರ ಮುಂದೆ ಚರ್ಚೆಗೆ ಬರಲಿ. ಅದನ್ನು ಬಿಟ್ಟು ಕುವೆಂಪು ಅವರಿಗೆ ಅವಮಾನ ಮಾಡಲಾಗಿದೆ. ವಾಕ್ಯ ಬದಲಾವಣೆಯಿಂದ ಅವಮಾನವಾಗಿ ಎಂಬುವಂತ ವಿವಾದಾತ್ಮಕ ಹೇಳಿಕೆ ನೀಡುವುದನ್ನು ಬಿಟ್ಟು ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.
ಕೇಂದ್ರ ಸಚಿವ ಜೋಶಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ರಾಹುಲ್ ಗಾಂಧಿಯವರಂತೆ ಮಾತನಾಡುತ್ತೇನೆ ಎಂದು ಹೇಳಿರುವುದು ನಿಜಕ್ಕೂ ದೊಡ್ಡ ಮಾತು. ಇದರಿಂದ ನಾನು ಮೇಲಕ್ಕೆ ಹೋದಂತಾಗುತ್ತದೆ. ಆದರೆ ಬಿಜೆಪಿಯವರು ರಾಹುಲ್ ಗಾಂಧಿಯವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಕೇಂದ್ರ ಸಚಿವರ ಮಾತಿಗೆ ತಿರುಗೇಟು ನೀಡಿದರು.
ರಾಹುಲ್ ಗಾಂಧಿಯವರ ಸಂಸತ್ತಿನ ಸದಸ್ಯತ್ವವನ್ನು ರದ್ದು ಮಾಡಿದ್ದು, ಯಾಕೆ. ಅವರ ಪ್ರಭುತ್ವದಿಂದ ಬಿಜೆಪಿ ಮರ್ಯಾದೆ ಹೋಗುತ್ತದೆ ಎಂಬ ಕಾರಣಕ್ಕೆ ಹೀಗೆ ಮಾಡಿದ್ದಾರೆ. ರಾಹುಲ್ ಗಾಂಧಿಯವರು ಸಮರ್ಥ ನಾಯಕ ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಮೋದಿಯವರು ಹತ್ತು ವರ್ಷದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ. ಡಾಲರ್ ಮುಂದೆ ರೂಪಾಯಿ ಮೌಲ್ಯ ಎಲ್ಲಿ ಹೋಗಿದೆ ಏನು ಮಾಡಿದೆ ಬಿಜೆಪಿ ಸರ್ಕಾರ ಎಂಬ ವಿಷಯದ ಬಗ್ಗೆ ಚರ್ಚೆ ಮಾಡಲಿ ಎಂದು ಸವಾಲು ಹಾಕಿದರು.