TEMPLE OF KNOWLEDGE: ಕುವೆಂಪು ಅವರ ವೇದವಾಕ್ಯವನ್ನು ತೆಗೆದು ಮಣಿವಣ್ಣನ್ ಅವರ ವೇದವಾಕ್ಯ ಹಾಕಿದ್ದಾರೆ: ಆರ್ ಅಶೋಕ್ ಆಕ್ರೋಶ

ವಿಧಾನಸೌಧ : ಕುವೆಂಪು ಅವರ ವಾಕ್ಯ ಜ್ಞಾನ ದೇಗುಲ ಕೈಮುಗಿದು ಒಳಗೆ ಬನ್ನಿ ಎನ್ನುವುದು ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಎತ್ತಿ ಹಿಡಿಯುವಂಥದ್ದು, ಅದನ್ನು ಬದಲಾವಣೆ ಮಾಡಲು ಹೊರಟಿರುವ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಬದಲಾವಣೆಯಾಗಿದ್ದಾರೆ ಅಂತ ಪ್ರಪಂಚವೇ ಬದಲಾಗಬೇಕು ಎನ್ನುವ ಮನಸ್ಥಿತಿಯಲ್ಲಿದ್ದಾರೆ ಎಂದು ಕಿಡಿಕಾರಿದರು.
ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ವಸತಿ ಶಾಲೆಗಳ ಘೋಷವಾಕ್ಯ ಬದಲಾವಣೆ ಮಾಡುತ್ತಿರುವುದು ಯಾವ ಉದ್ದೇಶದಿಂದ ಎಂದು ಪ್ರಶ್ನಿಸಿದರು. ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಹೋದ್ರು ಎಲ್ಲಾ ಕಡೆ ಜ್ಞಾನ ದೇಗುಲ ಎಂದು ಹೇಳುತ್ತೇವೆ, ಶಾಲೆ ಕಲಿಯಲು ಒಂದು ದೇವಸ್ಥಾನವಿದ್ದಂತೆ, ಇವರು ಧೈರ್ಯದಿಂದ ಪ್ರಶ್ನಿಸಿ ಅಂದ್ರೆ ಪ್ರಶ್ನೆ ಮಾಡೋದು ಎಲ್ಲಿ..? ಎಂದರು.
ಪ್ರಶ್ನೆಯನ್ನು ಶಿಕ್ಷಕರ ಬಳಿ ಮಾಡಬೇಕು, ಯಾವ ಪಾಠ ಅರ್ಥವಾಗಲ್ವೋ ಅಲ್ಲಿ ಪ್ರಶ್ನೆ ಮಾಡಬೇಕು, ಅದನ್ನು ಬಿಟ್ಟು ಕುವೆಂಪು ಅವರ ಈ ವೇದವಾಕ್ಯವನ್ನು ತೆಗೆದುಹಾಕುವಂಥದ್ದು ಇದು ಕೆಟ್ಟ ಸಂಸ್ಕೃತಿ, ಇಡೀ ಸರ್ಕಾರ ಇದರ ಹಿಂದೆ ಇದೆ ಎಂದು ಆರೋಪಿಸಿದರು.
ಮೊನ್ನೆ ಗಣೇಶನ ಪೂಜೆ ಮಾಡೋ ಹಾಗಿಲ್ಲ ಸರಸ್ವತಿ ಪೂಜೆ ಮಾಡೋ ಹಾಗಿಲ್ಲ ಅಂತ ಆದೇಶ ಮಾಡಿದ್ದರು, ಆ‌ ಮೇಲೆ ಏನಾಯ್ತೋ ವಾಪಸ್ ತೆಗೆದುಕೊಂಡರು, ಈಗ ಮತ್ತೊಂದು ಕಥೆ, ಕುವೆಂಪು ಅವರ ವೇದವಾಕ್ಯವನ್ನು ತೆಗೆದು ಮಣಿವಣ್ಣನ್ ಅವರ ವೇದವಾಕ್ಯವನ್ನು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಆದೇಶ ಎಲ್ಲಿದೆ ಮಂತ್ರಿಗಳ ಆದೇಶ ಎಲ್ಲಿದೆ..? ಇದುವರೆಗೂ ಮಂತ್ರಿಗಳ ಆದೇಶದ ಪ್ರತಿ ನಮಗೆ ಸಿಕ್ಕಿಲ್ಲ ಎಂದು ಹೇಳಿದ ಅವರು, ಒಬ್ಬ ಪ್ರಧಾನ ಕಾರ್ಯದರ್ಶಿ ಹುಚ್ಚುಚ್ಚಾಗಿ ಅವನಿಗೆ ಮನಸ್ಸಿಗೆ ಬಂದ ಹಾಗೆ ಚೇಂಜ್ ಮಾಡಿದ್ದಾನೆ, ಈಗ ವಿಧಾನಸೌಧದ ಮುಂದೆ ಸರ್ಕಾರದ ಕೆಲಸ ದೇವರ ಕೆಲಸ ಅಂತ ಇದೆ, ಯಾರೋ ಕಾರ್ಯದರ್ಶಿ ಬಂದು ಅದನ್ನ ಅಳಿಸು ಹಾಕಿ ಅಂದ್ರೆ ಅರ್ಥ ಏನು ಎಂದು ಪ್ರಶ್ನಿಸಿದರು.
ಕೆಂಗಲ್ ಹನುಮಂತಯ್ಯನವರು ಆ ಕಾಲದಲ್ಲಿ ಯಾವ ಉದ್ದೇಶಕ್ಕೆ ಬಳಸಿದ್ದರು, ಅದರ ಹಿಂದಿನ ಅರ್ಥ ಏನು..? ಇದು ದೇವರ ಕೆಲಸ ಇಲ್ಲಿಗೆ ಬರುವರೆಲ್ಲ ಭ್ರಷ್ಟಾಚಾರ ಆಗಬಾರದು ಎಂಬ ತಿಳುವಳಿಕೆ ಹೇಳಲು ಮಾಡಿದ್ದರು, ಮಕ್ಕಳು ಕೈಮುಗಿದು ಒಳಗೆ ಬನ್ನಿ ಅಂತ ಅಂದ್ರೆ ತಪ್ಪೇನು, ಬೇರೆ ದೇಶದ ಪ್ರಧಾನಿಗಳು ನಮ್ಮ ದೇಶಕ್ಕೆ ಬಂದಾಗ ಅವರು ಕೈ ಮುಗಿಯುತ್ತಾರೆ, ಅಂತಹದರಲ್ಲಿ ಕೇಡುಗಾಲ ಬಂದಿರುವ ಈ ಸರ್ಕಾರ ಆದೇಶ ಇಲ್ಲದೆ ನಾಮಫಲಕ ಬದಲಾಯಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಕಳೆದ ಬಾರಿಯ ಸಿದ್ದರಾಮಯ್ಯನವರ ಬೇರೆ ಈಗಿರುವ ಸಿದ್ದರಾಮಯ್ಯನವರೇ ಬೇರೆ, ಸಿದ್ದರಾಮಯ್ಯನವರಿಗೆ ಆಡಳಿತದಲ್ಲಿ ಹಿಡಿತ ಇಲ್ಲ, ಮೊನ್ನೆ ಬಜೆಟ್ ಮಾಡಿದಾಗ್ಲೂ ನೋಡಿದ್ದೇವೆ, ಅದು ಅವರ ಬಜೆಟ್ ಅಲ್ಲ ಡೂಪ್ಲಿಕೇಟ್ ಬಜೆಟ್ ಎಂದು ಕಿಡಿಕಾರಿದರು.
ಅಧಿಕಾರಿಗಳು ಬೇಕಾಬಿಟ್ಟಿ ಆದೇಶನ ಚೇಂಜ್ ಮಾಡ್ತಿದ್ದಾರೆ, ಮಂತ್ರಿಗಳನ್ನ ಕೇಳಲ್ಲ, ಮುಖ್ಯಮಂತ್ರಿಗಳನ್ನ ಕೇಳಲ್ಲ, ಸರ್ಕಾರಕ್ಕೆ ಅಧಿಕಾರಿಗಳಿಂದ ಕವಡೆ ಕಾಸಿನ ಕಿಮ್ಮತ್ತಿಲ್ಲ, ಇಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಅನ್ನೋದಲ್ಲ ವಿಚಾರ, ಇಲ್ಲಿ ಬರುವಾಗ ಭಕ್ತಿಯಿಂದ ಪವಿತ್ರತೆಯಿಂದ ಬಾ ಎಂದು ಹೇಳೋದು ಎಂದರು.
ಅಧಿಕಾರಿಗಳ ಕೈಗೆ ಅಧಿಕಾರ ಕೊಟ್ಟು ಸಚಿವರು ಮೋಜು-ಮಸ್ತಿಯಲ್ಲಿದ್ದಾರೆ ಎಂದು ಆರೋಪಿಸಿದ ಅಶೋಕ್, ಹೇಳೋರು ಕೇಳೋರು ಇಲ್ಲದಂತ ಸರ್ಕಾರವಾಗಿದೆ, ಯಾರು ಪ್ರಧಾನ ಕಾರ್ಯದರ್ಶಿ ಇದ್ದಾರೋ ಅವರ ವಿರುದ್ಧ ಕ್ರಮ ಆಗಬೇಕು, ಅವರನ್ನು ಅಲ್ಲಿಂದ ಎತ್ತಂಗಡಿ ಮಾಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

More News

You cannot copy content of this page