ಬೆಂಗಳೂರು : ರಾಜ್ಯ ಸಭೆ ಚುನಾವಣೆಯಲ್ಲಿ ಅಡ್ಡ ಮತದಾನದ ಭೀತೀ ಎದುರಿಸುತ್ತಿರುವ ಆಡಳಿತ ರೂಢ ಕಾಂಗ್ರೆಸ್ ಪಕ್ಷ ಹೋಟೆಲ್ ರಾಜಕಾರಣಕ್ಕೆ ಮೊರೆಹೋಗಿದೆ. ಇಂದು ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಂಡ ನಂತರ ಎಲ್ಲಾ ಶಾಸಕರನ್ನು ಹೋಟೆಲ್ ಕರೆದೊಯ್ದು ಮಂಗಳವಾರ ನಡೆಯಲಿರುವ ಮತದಾನಕ್ಕೆ ಕರೆತರಲಾಗುವುದು.
ಮಂಗಳವಾರ ರಾಜ್ಯಸಭೆಗೆ ಚುನಾವಣೆ ನಡೆಯಲಿದೆ. ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿ- ಜೆಡಿಎಸ್ ಮೈತ್ರಿಯ ಐದನೇ ಅಭ್.ರ್ಥಿ ಕಣದಲ್ಲಿರುವುದರಿಂದ ಚುನಾವಣೆ ರಂಗೇರಿದೆ. ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಇಂದು ಸಂಜೆ ಹೋಟೆಲ್ ನಲ್ಲಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕರೆದಿದ್ದಾರೆ.

ಸುರಪುರದ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನಹೊಂದಿರುವ ಹಿನ್ನೆಲೆಯಲ್ಲಿ ವಿಧಾನಮಂಡಲದಲ್ಲಿ ಇಂದು ಸಂತಾಪ ಸೂಚನೆ ನಡೆಯಲಿದೆ. ಕೋರಮಂಗಲದ ಎಂಬೆಸಿ ಗಾಲ್ಫ್ ಲಿಂಕ್ಸ್ ಬ್ಯುಸಿನೆನ್ ಪಾರ್ಕ್ ನಲ್ಲಿರುವ ಹಿಲ್ಟನ್ ಹೋಟೆಲ್ ಗೆ ಎಲ್ಲಾ ಶಾಸಕರು ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದುಬಂದಿದೆ.
ಸಂಜೆ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾರು ಯಾರಿಗೆ ಮತ ಚಲಾಯಿಸಬೇಕು ಎನ್ನುವುದರ ಕುರಿತು ಸುದೀರ್ಘ ಚರ್ಚೆಯಾಗಲಿದೆ. ಸಭೆಯಲ್ಲಿ ಪಕ್ಷದ ಅಭ್ಯರ್ಥಿಗಳಾದ ಅಜಯ್ ಮಾಕನ್, ಸೈಯದ್ ನಾಸಿರ್ ಹುಸೇನ್ ಮತ್ತು ಜಿ ಸಿ ಚಂದ್ರಶೇಖರ್ ಭಾಗವಹಿಸಲಿದ್ದಾರೆ.
ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ, ಪಕ್ಷೇತರರಾದ ಲತಾ ಮಲ್ಲಿಕಾರ್ಜುನ ಮತ್ತು ಕೆ ಎಚ್ ಪುಟ್ಟಸ್ವಾಮಿಗೌಡ ಅವರನ್ನು ಹಿಲ್ಟನ್ ಹೋಟೆಲ್ ಗೆ ಕರೆದೊಯ್ಯುವ ಕಸರತ್ತಿನಲ್ಲಿ ಕಾಂಗ್ರೆಸ್ ಮುಖಂಡರು ತೊಡಗಿದ್ದು, ಇವರ ಮತಗಳು ತುಂಬಾನೇ ಪ್ರಾಶಸ್ತ್ಯ ಪಡೆದಿವೆ.