ಬೆಂಗಳೂರು ; ರಾಜ್ಯಸಭೆ ಚುನಾವಣಾ ಅಖಾಡ ಇದೀಗ ಕಳೆಕಟ್ಟಿದೆ. ಕರ್ನಾಟಕದಿಂದ ಐದು ಅಭ್ಯರ್ಥಿಗಳು ಇದೀಗ ಕಣದಲ್ಲಿದ್ದಾರೆ.ಅತ್ತ ನಾಲ್ಕು ಅಭ್ಯರ್ಥಿಗಳು ನಿರಾಯಾಸ ಗೆಲುವು ಸಾಧಿಸಲಿದ್ದು, ಇತ್ತ ಬಿಜೆಪಿ-ಜೆಡಿಎಸ್ ಮೈತ್ರಿಯ ಐದನೇ ಅಭ್ಯರ್ಥಿ ಕಣಕ್ಕಿಳಿಯುವ ಮೂಲಕ ರಾಜ್ಯಸಭೆ ಚುನಾವಣೆಯಲ್ಲಿ ನಂಬರ್ ಗೇಮ್ ಆರಂಭವಾಗಿದ್ದು, ಅಡ್ಡಮತದಾನದ ಭೀತಿ ಹುಟ್ಟಿಸಿದೆ.
ರಾಜ್ಯಸಭೆ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಫೆ.27ಕ್ಕೆ ರಾಜ್ಯಸಭೆ ಚುನಾವಣೆ ನಡೆಯಲಿದೆ. ಇರುವ ನಾಲ್ಕು ಸೀಟುಗಳಿಗೆ ಐದು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ, ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿ ಚುನಾವಣೆ ಕುತೂಹಲ ಕೆರಳುವಂತೆ ಮಾಡಿದೆ. ಕಾಂಗ್ರೆಸ್ ರಾಜ್ಯದಿಂದ ಅಜಯ್ ಮಕೇನ್, ಸಯ್ಯದ್ ನಸೀರ್ ಹುಸೇನ್ ಮತ್ತು ಜಿ.ಸಿ.ಚಂದ್ರಶೇಖರ್ ರನ್ನು ಕಣಕ್ಕಿಳಿಸಿದೆ. ಇತ್ತ ಬಿಜೆಪಿ ನಾರಾಯಣಸಾ ಬಾಂಡಗೆಯನ್ನು ಕಣಕ್ಕಿಳಿಸಿದೆ. ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿಯನ್ನು ಕಣಕ್ಕಿಳಿಸಿದೆ. ಐದನೇ ಅಭ್ಯರ್ಥಿ ಕಣಕ್ಕಿಳಿಸಿರುವುದರಿಂದ ರಾಜ್ಯಸಭೆ ಚುನಾವಣಾ ಅಖಾಡ ಕಳೆಗಟ್ಟಿದೆ.

ಕಾಂಗ್ರೆಸ್ ಪಕ್ಷಕ್ಕೆ ತನ್ಮ ಮೂರು ಅಭ್ಯರ್ಥಿಗಳನ್ಮು ಹಾಗೂ ಬಿಜೆಪಿಗೆ ತನ್ನ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಲು ಬೇಕಾದ ಮತಬಲ ಹೊಂದಿದೆ. ಆದರೆ ಐದನೇ ಅಭ್ಯರ್ಥಿ ಗೆಲ್ಲಲು ಮತ ಕೊರತೆ ಎದುರಾಗಿದೆ. ಇದೇ ಈಗ ರಾಜ್ಯಸಭೆ ಚುನಾವಣೆಯಲ್ಲಿನ ನಂಬರ್ ಗೇಮ್ ಗೆ ವೇದಿಕೆ ಸಜ್ಜುಗೊಳಿಸಿದೆ. ಐದನೇ ಅಭ್ಯರ್ಥಿಯಿಂದ ಎದುರಾಗಿರುವ ಚುನಾವಣೆಗಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ತಮ್ಮದೇ ಆದ ಲೆಕ್ಕಾಚಾರ, ಕಾರ್ಯತಂತ್ರ ರೂಪಿಸಿದೆ. ನಾಲ್ಕು ಅಭ್ಯರ್ಥಿಗಳ ಗೆಲುವು ನಿರಾಯಾಸವಾಗಿದ್ದು, ಐದನೇ ಅಭ್ಯರ್ಥಿಯ ಸ್ಪರ್ಧೆ ಹಲವು ರಾಜಕೀಯ ಲೆಕ್ಕಾಚಾರಕ್ಕೆ ಕಾರಣವಾಗಿದೆ.

ಸದ್ಯದ ಮತಗಳ ಲೆಕ್ಕಾಚಾರ ಹೇಗಿದೆ?:
ಅಭ್ಯರ್ಥಿಯ ಗೆಲುವಿಗೆ 45 ಮತಗಳ ಅಗತ್ಯವಿದೆ. ಇದನ್ನು ಮೊದಲ ಪ್ರಾಶಸ್ತ್ಯದ ಮತಗಳು ಎನ್ನಲಾಗುತ್ತದೆ. ಅದರಂತೆ ಕಾಂಗ್ರೆಸ್ ಶಾಸಕರ ಬಲ ಸದ್ಯ 134 ಇದೆ (ಸುರಪುರ ಕಾಂಗ್ರೆಸ್ ಶಾಸಕ ನಿಧನ), ಬಿಜೆಪಿ 66 ಶಾಸಕರ ಬಲ ಹೊಂದಿದೆ. ಇತ್ತ ಜೆಡಿಎಸ್ 19 ಶಾಸಕರ ಬಲ ಹೊಂದಿದೆ. ಕಾಂಗ್ರೆಸ್ ನಿಂದ ಇದೀಗ ಸುರಪುರ ಶಾಸಕ ನಿಧನದಿಂದ ಒಂದು ಸ್ಥಾನ ಕಡಿಮೆಯಾಗಿದ್ದು ಒಟ್ಟು ಬಲ 134 ಇದ್ದು, ಮೇಲ್ನೋಟಕ್ಕೆ ಪಕ್ಷೇತರ ಅಭ್ಯರ್ಥಿಗಳ ಬೆಂಬಲದೊಂದಿಗೆ ಮೂರು ಅಭ್ಯರ್ಥಿಗಳನ್ನು ಗೆಲ್ಲಿಸುವ ಸಂಖ್ಯಾ ಬಲ ಹೊಂದಿದೆ. ಪಕ್ಷೇತರ ಅಭ್ಯರ್ಥಿಗಳಾದ ದರ್ಶನ್ ಪುಟ್ಟಣ್ಣಯ್ಯ, ಲತಾ ಮಲ್ಲಿಕಾರ್ಜುನ್, ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ, ಜನಾರ್ಧನ ರೆಡ್ಡಿ ಮತಗಳು ನಿರ್ಣಾಯಕವಾಗಿವೆ. ಮೂವರು ಪಕ್ಷೇತರರು ಕಾಂಗ್ರೆಸ್ ಪರವಾಗಿದ್ದು, ಜನಾರ್ಧನ ರೆಡ್ಡಿ ಯಾರ ಪರ ಮತ ಹಾಕಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.
ಇತ್ತ ಬಿಜೆಪಿ ತನ್ನ ಓರ್ವ ಅಭ್ಯರ್ಥಿಯನ್ನು ನಿರಾಯಾಸವಾಗಿ ಗೆಲ್ಲಿಸಲಿದೆ. ತನ್ನ ಅಭ್ಯರ್ಥಿಗೆ 45 ಮತ ಹಾಕಿದ ಬಳಿಕ ಬಿಜೆಪಿಯ 21 ಮತಗಳು ಉಳಿಯಲಿದೆ. ಜೊತೆಗೆ ಜೆಡಿಎಸ್ ನ 19 ಸಂಖ್ಯಾಬಲದೊಂದಿಗೆ ಐದನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ 40 ಮತಗಳು ಬೀಳಲಿದ್ದು, ಮತ್ತೆ ಐದು ಮತಗಳ ಕೊರತೆಯಾಗಲಿದೆ. ಪಕ್ಷೇತರ ಅಭ್ಯರ್ಥಿಗಳ ಮತ ಇಲ್ಲಿ ನಿರ್ಣಾಯಕವಾಗಲಿದೆ. ಪ್ರಾಶಸ್ತ್ಯ ಮತಗಳ ಲೆಕ್ಕಾಚಾರ ಹಾಗೂ ಅಡ್ಡ ಮತದಾನದ ಸಾಧ್ಯತೆ ಮೇರೆಗೆ ಐದನೇ ಅಭ್ಯರ್ಥಿಯ ಗೆಲುವು ನಿಗದಿಯಾಗಲಿದೆ.
ಮತಮೌಲ್ಯ ಫಾರ್ಮುಲಾ ಹೀಗಿದೆ:

ಶಾಸಕರು ಚಲಾಯಿಸುವ ಒಂದು ಮತದ ಮೌಲ್ಯ 100 ಆಗಿದೆ.ಇಲ್ಲಿ ನಾಲ್ಕು ರಾಜ್ಯಸಭೆ ಸೀಟು ಭರ್ತಿ ಮಾಡಬೇಕಾಗಿದ್ದು,ಅದರ ಫಾರ್ಮುಲಾ ಪ್ರಕಾರ ಒಬ್ಬ ಅಭ್ಯರ್ಥಿ ಗೆಲ್ಲ ಬೇಕಾದರೆ 4481 ಮತಮೌಲ್ಯದ ಅಗತ್ಯ ಇದೆ. ಅಂದರೆ ಒಂದು ಅಭ್ಯರ್ಥಿ ಗೆಲುವಿಗೆ ಕನಿಷ್ಠ 45 ಮತದಾರರು (ಶಾಸಕರು)ಮತ ಚಲಾಯಿಸಬೇಕು. ಒಂದು ಮತದ ಮೌಲ್ಯ 100ರಂತೆ ಈ 45 ಮತಗಳ ಮೌಲ್ಯ 4,500 ಆಗಿರುತ್ತದೆ.ಆದರೆ, ರಾಜ್ಯದಲ್ಲಿನ 4 ರಾಜ್ಯಸಭೆ ಸ್ಥಾನದ ಚುನಾವಣೆಯ ಮತ ಫಾರ್ಮುಲಾದಂತೆ ಗೆಲುವಿಗೆ ಬೇಕಾಗಿರುವುದು 4,481 ಮತಮೌಲ್ಯ. (ಒಟ್ಟು ಸಿಂಧು ಮತಗಳ ಆಧಾರದಲ್ಲಿ ಮತಮೌಲ್ಯ ಬದಲಾಗುತ್ತದೆ). ಆದರೆ ಒಟ್ಟು 224 ಸಂಖ್ಯಾಬಲ ಹೊಂದಿರುವ ಕರ್ನಾಟಕ ವಿಧಾನಸಭೆ ಸುರಪುರ ಕೈ ಶಾಸಕ ವೆಂಕಟಪ್ಪ ನಾಯಕ ನಿಧನದಿಂದ 223ಕ್ಕೆ ಕುಸಿದಿದೆ. ಹೀಗಾಗಿ ಆ ಲೆಕ್ಕಾಚಾರದಂತೆ ಸದ್ಯ ಅಭ್ಯರ್ಥಿಗೆ ಗೆಲ್ಲಬೇಕಾದರೆ ಬೇಕಾಗುವ ಕನಿಷ್ಠ ಮತ 4,461.

ಹೀಗಾಗಿ ಒಬ್ಬ ಅಭ್ಯರ್ಥಿಯ ಗೆಲುವಿಗೆ 45 ಶಾಸಕರು ಮೊದಲ ಪ್ರಾಶಸ್ತ್ಯದ ಮತ ಹಾಕಬೇಕು. ಒಂದು ಮತದ ಮೌಲ್ಯ 100ರಂತೆ ಈ 45 ಶಾಸಕರ ಮತಗಳ ಮೌಲ್ಯ 4,500 ಆಗಿರುತ್ತದೆ.ಅಂದರೆ ಗೆಲುವಿನ ಅಭ್ಯರ್ಥಿಗೆ ಗೆಲುವಿಗೆ ಬೇಕಾದ ಕನಿಷ್ಠ ಮತಮೌಲ್ಯಗಿಂತ 39 ಮತ ಮೌಲ್ಯಗಳು ಹೆಚ್ಚುವರಿಯಾಗಿ ಬಿದ್ದಂತಾಗುತ್ತದೆ.ಇತ್ತ ಮೈತ್ರಿ ಪಕ್ಷಗಳ ಐದನೇ ಅಭ್ಯರ್ಥಿಗೆ ಈ ಹೆಚ್ಚುವರಿ ಮತಮೌಲ್ಯವನ್ನು ಸೇರಿಸಿ,ಲೆಕ್ಕಾಚಾರ ಮಾಡಲಾಗುತ್ತದೆ.ಫಾರ್ಮುಲಾ ಪ್ರಕಾರ ಕುಪೇಂದ್ರ ರೆಡ್ಡಿಗೆ ಬೀಳುವ ಮೊದಲ ಪ್ರಾಶಸ್ತ್ಯ ಮತ ಹಾಗೂ ಎರಡನೇ ಪ್ರಾಶಸ್ತ್ಯದ ಮತಗಳಿಗೆ ಬಿಜೆಪಿ ಅಭ್ಯರ್ಥಿಯ ಮೊದಲ ಪ್ರಾಶಸ್ತ್ಯದಿಂದ ವರ್ಗಾವಣೆಗೊಳ್ಳಲಿರುವ ಹೆಚ್ಚುವರಿ ಮತಮೌಲ್ಯಗಳನ್ನು ಸೇರಿಸಿ ಗೆಲುವು,ಸೋಲಿನ ಲೆಕ್ಕಾಚಾರ ಮಾಡಲಾಗುತ್ತದೆ.
ಪಕ್ಷಗಳು ಸಂಖ್ಯಾಬಲದ ಆಧಾರದಲ್ಲಿ ಕನಿಷ್ಠ ಗೆಲುವಿನ ಮತಮೌಲ್ಯವನ್ನು ಗಮನದಲ್ಲಿಟ್ಟುಕೊಂಡು ತನ್ನ ಅಭ್ಯರ್ಥಿಗಳಿಗೆ ಎಷ್ಟು ಮೊದಲ ಪ್ರಾಶಸ್ತ್ಯದ ಮತ ಹಾಗೂ ಎಷ್ಟು ಎರಡನೇ ಪ್ರಾಶಸ್ತ್ಯದ ಮತ ಹಾಕಬೇಕು ಎಂಬ ತಮ್ಮದೇ ಆದ ಗೆಲುವಿನ ಲೆಕ್ಕಾಚಾರದ ನಂಬರ್ ಗೇಮ್ ರೂಪಿಸುತ್ತವೆ.
ಕಾಂಗ್ರೆಸ್,ಬಿಜೆಪಿ,ಜೆಡಿಎಸ್ ಗೆ ಅಡ್ಡಮತದ ತೂಗುಗತ್ತಿ

ಎಲ್ಲವೂ ಅಂದುಕೊಂಡಂತೆ ಮತ ಚಲಾವಣೆ ಆದರೆ ನಾಲ್ಕು ಸೀಟಿನಲ್ಲಿ ಕಾಂಗ್ರೆಸ್ ಮೂವರು, ಬಿಜೆಪಿಯ ಓರ್ವ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಆದರೆ ಒಂದು ವೇಳೆ ಅಡ್ಡ ಮತದಾನ ಆದರೆ ಸೋಲು,ಗೆಲುವಿನ ಲೆಕ್ಕಾಚಾರವೆಲ್ಲವೂ ಉಲ್ಟಾಪಲ್ಟಾ ಆಗಲಿದೆ.ಐದನೇ ಅಭ್ಯರ್ಥಿ ಕಣಕ್ಕಿಳಿಸಿರುವುದರಿಂದ ಅಡ್ಡಮತದಾನದ ಭೀತಿ ಎದುರಾಗಿದೆ.ಒಂದು ವೇಳೆ ಅಡ್ಡಮತದಾನ ನಡೆದರೆ ಕಾಂಗ್ರೆಸ್ ನ ಮೂರನೇ ಅಭ್ಯರ್ಥಿ ಹಾಗೂ ಮೈತ್ರಿಯ ಐದನೇ ಅಭ್ಯರ್ಥಿಯ ಸೋಲು ಗೆಲುವಿನ ಫಲಿತಾಂಶವನ್ನು ಬುಡಮೇಲು ಮಾಡುವ ಆತಂಕ ಎದುರಾಗಿದೆ.
ಕಾಂಗ್ರೆಸ್ ಗೆ ಬಹುವಾಗಿ ಅಡ್ಡಮತದಾನದ ಭೀತಿ ಕಾಡುತ್ತಿದ್ದು,ಇಂದು ತನ್ನ ಎಲ್ಲಾ ಶಾಸಕರನ್ನು ರೆಸಾರ್ಟ್ ಗೆ ಕರೆದೊಯ್ಯುದು ವಾಸ್ತವ್ಯ ಹೂಡಲಿದೆ.ಇತ್ತ ಬಿಜೆಪಿಯೂ ಕಾಂಗ್ರೆಸ್ ನತ್ತ ಮುಖ ಮಾಡಿರುವ ತಮ್ಮ ಇಬ್ಬರು ಶಾಸಕರು ನಡೆಯ ಬಗ್ಗೆಯೂ ಆತಂಕದಲ್ಲಿದೆ.ಇನ್ನು ಜೆಡಿಎಸ್ ನಲ್ಲೂ ಅಡ್ಡಮತದಾನದ ಭೀತಿ ಹೆಚ್ಚಾಗಿದೆ. ಕೆಲ ದಳ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.ಹೀಗಾಗಿ ಐದನೇ ಅಭ್ಯರ್ಥಿಯಿಂದ ಬಹುವಾಗಿ ಕಾಂಗ್ರೆಸ್ ಸೇರಿ ಬಿಜೆಪಿ ಹಾಗೂ ಜೆಡಿಎಸ್ ಮೇಲೆ ಅಡ್ಡ ಮತದಾನದ ತೂಗುಗತ್ತಿ ನೇತಾಡುತ್ತಿದೆ.ಇದರ ಜೊತೆಗೆ ಅಸಿಂಧು ಮತ, ಮತದಾನಕ್ಕೆ ಗೈರು ಸಹ ಫಲಿತಾಂಶವನ್ನು ಏರುಪೇರು ಮಾಡುವ ಭೀತಿ ಮೂಡಿಸಿದೆ.