ವಯನಾಡು : ಕೇರಳಾದ ವಯನಾಡಿನ ಬೇಲೂರು ಮಖ್ನಾದಲ್ಲಿ ಕಾಡಾನೆ ತುಳಿದು ಸಾವನ್ನಪ್ಪಿದ ಕೇರಳ ಮೂಲದ ಅಜಿತ್ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ರಾಜ್ಯದಿಂದ ಅವರಿಗೆ 15 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿತ್ತು. ಆದರೆ, ಈ ಪರಿಹಾರ ಹಣ ತಮಗೆ ಬೇಡ ಎಂದು ಮೃತ ಅಜಿಶ್ ಕುಟುಂಬ ಪರಿಹಾರವನ್ನು ಸ್ಪಷ್ಟವಾಗಿ ನಿರಾಕರಿಸಿದೆ.
ಪರಿಹಾರ ಘೋಷಿಸಿದ ಕೂಡಲೇ ಬಿಜೆಪಿ ಕೆಲವು ಶಾಸಕರು ವಿಧಾನಸಭೆಯಲ್ಲಿ ಗದ್ದಲ ಸೃಷ್ಟಿಸಿದ್ದರು. ಬಿಜೆಪಿಯವರ ನಡವಳಿಕೆಗೆ ಬೇಸತ್ತು ಅಜಿತ್ ಅವರ ಕುಟುಂಬ ಈ ನಿರ್ಧಾರ ಕೈಗೊಂಡಿದೆ, ಬಿಜೆಪಿ ಮುಖಂಡರ ನಡವಳಿಕೆ ಅಮಾನವೀಯ ಎಂದು ಅವರು ಕಿಡಿಕಾರಿದ್ದಾರೆ.
ಫೆಬ್ರುವರಿ 10 ರಂದು ಕಾಡಾನೆ ತುಳಿದಿದ್ದರಿಂದ ಅಜಿತ್ ಮೃತಪಟ್ಟಿದ್ದರು. ಆ ಕಾಡಾನೆಗೆ ಕರ್ನಾಟಕ ಸರ್ಕಾರ ರೇಡಿಯೋ ಕಾಲರ್ ಅಳವಡಿಸಿದ್ದರಿಂದ ರಾಜ್ಯ ಸರ್ಕಾರ ಪರಿಹಾರ ಘೋಷಿಸಿತ್ತು. ಆದರೆ ಅವರ ಕುಟುಂಬ ಇದನ್ನು ನಿರಾಕರಿಸಿದೆ.
ಅಜಿತ್ ಮೃತಪಟ್ಟ ಪ್ರದೇಶ ವಯನಾಡು ಲೋಕಸಭಾ ಕ್ಷೇತ್ರಕ್ಕೆ ಬರುತ್ತಿದೆ. ಅದರ ಸಂಸದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಿರುವ ಹಿನ್ನೆಲೆಯಲ್ಲಿ ಅವರಿಗೆ ಸಮಾಧಾನ ಪಡಿಸಲು ಪರಿಹಾರ ನೀಡಿದೆ ಎಂದು ಬಿಜೆಪಿಯವರು ರಾಜಕೀಯ ಮಾಡಿದ್ದರು. ನಮ್ಮ ತೆರಿಗೆ ಹಣ ರಾಹುಲ್ ಕ್ಷೇತ್ರಕ್ಕೆ ಎಂದು ಲೇವಡಿ ಮಾಡಿದ್ದರಿಂದ ಬೇಸತ್ತು ಅಜಿತ್ ಕುಟುಂಬ ಪರಿಹಾರದ ಹಣವನ್ನು ವಾಪಾಸ್ಸು ಮಾಡಿದ್ದಾರೆ.