ನವದೆಹಲಿ : ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಅವರು ಇಂಗ್ಲೆಂಡ್ ನ ಆಸ್ಪತ್ರೆಯೊಂದರಲ್ಲಿ ಹಿಮ್ಮಡಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿರುವ ಅವರು, ನಾನು ಯಶಸ್ವಿ ಪಾದದ (ಹಿಮ್ಮಡಿ) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಸಂಪೂರ್ಣ ಗುಣಮುಖನಾಗಲು ಒಂದಷ್ಟು ಸಮಯ ಬೇಕಾಗುತ್ತದೆ. ಆದರೆ, ಅತೀ ಶೀಘ್ರದಲ್ಲೇ ಗುಣಮುಖನಾಗುವ ವಿಶ್ವಾಸ ತಮಗಿದೆ ಎಂದು ಬರೆದುಕೊಂಡಿದ್ದಾರೆ.
ಸಾವಿರಾರು ಅವರ ಅಭಿಮಾನಿಗಳು ಮೊಹಮ್ಮದ್ ಶಮಿ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದು, ಶೀಘ್ರವೇ ಗುಣಮುಖರಾಗಿ, ಮೈದಾನಕ್ಕಿಳಿಯಿರಿ ಎಂದು ಆಶಿಸಿದ್ದಾರೆ.
ಕಳೆದ ನವೆಂಬರ್ ನಲ್ಲಿ ಅವರು ಆಸ್ಚ್ರೇಲಿಯ ವಿರುದ್ಧದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಟವಾಡಿದ್ದರು. ತದನಂತರ ಅವರು ಯಾವುದೇ ರೀತಿಯ ಕ್ರಿಕೆಟ್ ಅನ್ನು ಆಡಿರಲಿಲ್ಲ. ಮೊಹಮ್ಮದ್ ಶಮಿ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಆರಂಭವಾಗಲಿರುವ ಐಪಿಎಲ್ ಟೂರ್ನಿಯಲ್ಲೂ ಭಾಗವಹಿಸುತ್ತಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.