Motor Vehicle Workers Social and Welfare Bill: ಮೋಟಾರ್ ವಾಹನ ಸಂಬಂಧಿತ ಕಾರ್ಮಿಕರ ಸಾಮಾಜಿಕ ಹಾಗೂ ಕ್ಷೇಮಾಭಿವೃದ್ಧಿ ಮಸೂದೆಗೆ ಅಂಗೀಕಾರ

ಬೆಂಗಳೂರು, ಫೆ. 29: ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಹಣಕಾಸು ನೆರವು ನೀಡುವ ಮತ್ತು ಕಾರ್ಮಿಕರಿಗೆ ಭದ್ರತಾ ಕಾರ್ಯಕ್ರಮಗಳ ವಿನಿಯೋಗಕ್ಕಾಗಿ ಮಂಡಳಿ ರಚಿಸಲು ಅವಕಾಶ ನೀಡುವ ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಸೂದೆ 2024ಕ್ಕೆ ವಿಧಾನಸಭೆ ಗುರುವಾರ ಅಂಗೀಕಾರ ನೀಡಿತು.

ಈ ಕುರಿತಂತೆ ಸಂತೋಷ್ ಲಾಡ್ ಅವರು ಕೆಲ ದಿನಗಳ ಹಿಂದೆ, ವಿಧಾನ ಪರಿಷತ್ ನಲ್ಲಿ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದರು.

ಸಾರಿಗೆ ಸಂಬಂಧಿತ ಕಾರ್ಮಿಕರಿಗೆ ಆರ್ಥಿಕ ಭದ್ರತೆಗೆ ಈ ಮಸೂದೆ ಸಹಾಯವಾಗಲಿದೆ ಎಂದು ಕಾರ್ಮಿಕ ಸಚಿವ ಸಂತೋ಼ಷ್‌ ಲಾಡ್‌ ಅವರು ತಿಳಿಸಿದ್ದರು.

ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಈ ಮಸೂದೆಯನ್ನು ಮಂಡಿಸಿದ್ದರು. ಮಸೂದೆಗೆ ಧ್ವನಿಮತದ ಅಂಗೀಕಾರ ದೊರೆತಿದೆ.

ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿಸಿದ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಸಹಾಯವಾಗಲು ಸಾಮಾಜಿಕ ಭದ್ರತೆ ಮತ್ತು ಇತರೆ ಕ್ಷೇಮಾಭಿವೃದ್ಧಿ ಕ್ರಮಗಳನ್ನು ಸೃಜಿಸಲು ಹಣಕಾಸು ನೆರವು ನೀಡಲು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ 1957 ರಿಂದ ನಿಧಿಗಳನ್ನು ಪುನರ್ ವಿನಿಯೋಗ ಮಾಡಲು ಮತ್ತು ಸದರಿ ಸಾಮಾಜಿಕ ವಿನಿಯೋಗಕ್ಕಾಗಿ ಮಂಡಳಿ ರಚಿಸಲು ಈ ವಿಧೇಯಕವನ್ನು ಮಂಡಿಸಲಾಗಿದೆ ಎಂದರು.

ಈ ವಿಧೇಯಕದಂತೆ ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ವಿಧೇಯಕ ಮಂಡಳಿ ಹೆಸರಿನಲ್ಲಿ ರಚನೆಯಾಗಲಿದ್ದು, ಕಾರ್ಮಿಕ ಸಚಿವರಾ ಸಂತೋಷ್ ಲಾಡ್ ಈ ಮಂಡಳಿಗೆ ಅಧ್ಯಕ್ಷರಾಗಿರುತ್ತಾರೆ.

ಕಾರ್ಮಿಕ ಹಾಗೂ ಸಾರಿಗೆ ಸಚಿವರ ಮುತುವರ್ಜಿಯ ನಡೆಯಿಂದ ಸಾರಿಗೆ ಕ್ಷೇತ್ರದಲ್ಲಿ ದುಡಿಯುವ ಅಸಂಘಟಿತ ವಲಯದ ಕಾರ್ಮಿಕರಿಗೆ ಈ ಮಸೂದೆ ವರದಾನವಾಗಲಿದೆ.

ಸಂತೋಷ್‌ ಲಾಡ್‌ ಅವರು ಕಾರ್ಮಿಕ ಸಚಿವರಾದ ನಂತರ ರಾಜ್ಯದ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಇದೀಗ ಈ ಮಸೂದೆ ಕಾಯ್ದೆಯಾಗಿ ಜಾರಿಗೆ ಬಂದರೆ ಅಸಂಖ್ಯಾತ ಕಾರ್ಮಿಕರಿಗೆ ನೆರವಾಗಲಿದೆ.

ಈಗಾಗಲೇ ಗಿಗ್‌ ಹಾಗೂ ಪತ್ರಿಕಾ ವಿತರಕರಿಗೆ ವಿಮೆ ಸೌಲಭ್ಯವನ್ನು ಜಾರಿಗೊಳಿಸಿದ್ದು, ಇದೀಗ ಸಾರಿಗೆ ಕ್ಷೇತ್ರದ ಶ್ರಮಿಕರಿಗೆ ಈ ಕಾಯ್ದೆ ಅನುಕೂಲವಾಗಲಿದೆ.

More News

You cannot copy content of this page