ನವದೆಹಲಿ : ದೆಹಲಿಯ ಜಲವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ನಡುವೆ ಜಗಳ ನಡೆದಿದೆ. ವಿದ್ಯಾರ್ಥಿಗಳ ಸಂಘದ ಚುನಾವಣೆಗೂ ಮುನ್ನ ಎಬಿವಿಪಿ ಮತ್ತು ಎಡಪಂಥೀಯ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದು, ಇದೀಗ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ.
ವಿಶ್ವವಿದ್ಯಾಲಯದ ಚುನಾವಣಾ ಸಮಿತಿ ಸದಸ್ಯರ ಆಯ್ಕೆ ವಿಚಾರವಾಗಿ ಈ ಘರ್ಷಣೆ ನಡೆದಿದೆ ಎಂದು ತಿಳಿದುಬಂದಿದ್ದು, ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯವರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಬಿವಿಪಿ ಮತ್ತು ಎಡಪಂಥೀಯ ವಿದ್ಯಾರ್ಥಿಗಳ ಗುಂಪುಗಳ ನಡುವೆ ನಡೆದ ಮಾತಿನ ಚಕಮಕಿ ಘರ್ಷಣೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಹಲವು ವಿಡಿಯೋಗಳು ಹರಿದಾಡುತ್ತಿದ್ದು, ಇವುಗಳ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.