ಬೆಂಗಳೂರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕಡೆ ಸ್ಪರ್ಧೆ ಮಾಡಿದ್ದಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದಯನೀಯವಾಗಿ ಸೋತು, ಪಕ್ಷದ ಮುಖಂಡರಾದ ಬಿಎಸ್ ಯಡಿಯೂರಪ್ಪ ವಿರುದ್ಧವೇ ಗುಡುಗಿದ್ದ ಮಾಜಿ ಶಾಸಕ ವಿ ಸೋಮಣ್ಣ ಇದೀಗ ತಮ್ಮ ತಣ್ಣಗಾಗಿದ್ದಾರೆ.
ತಮ್ಮ ಮೈಮನಸ್ಸನ್ನು ಮರೆತು ಇಂದು ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಮಹತ್ವದ ಮಾತುಕತೆ ನಡೆಸಿದರು. ಇಬ್ಬರೂ ಕೂಡ ತಮ್ಮ ಮನಸ್ತಾಪವನ್ನು ಬಿಟ್ಟು ಕೈ ಕುಲುಕಿದ್ದಾರೆ.
ಇಬ್ಬರೂ ನಾಯಕರ ನಡುವೆ ಇದೀಗ ರಾಜಿ ಸಂಧಾನ ಮಾಡಿಸಲಾಗಿದೆ. ತುಮಕೂರು ಲೋಕಸಭಾ ಟಿಕೇಟ್ ಆಕಾಂಕ್ಷಿಯಾಗಿರುವ ವಿ ಸೋಮಣ್ಣ ಅವರು, ಇಂದು ಈ ಕುರಿತು ಬಿ ಎಸ್ ಯಡಿಯೂರಪ್ಪ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸಭೆಯಲ್ಲಿ ಹಾಲಿ ಸಂಸದ ಜಿ.ಎಸ್ ಬಸವರಾಜ್ ಸೇರಿದಂತೆ ಆಕಾಂಕ್ಷಿ ವಿ. ಸೋಮಣ್ಣ, ಮಾಧುಸ್ವಾಮಿ ಪುತ್ರ ಸುದೀಪ್ ಹಾಗೂ ಜಗದೀಶ್ ಶೆಟ್ಟರ್ ಸೇರಿದಂತೆ ಪ್ರಮುಖರು ಹಾಜರಿದ್ದರು ಎಂದು ತಿಳಿದುಬಂದಿದೆ. ಸಭೆ
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿ ಸೋಮಣ್ಣ, ನಾವು ಟಿಕೆಟ್ ಬಗ್ಗೆ ಮಾತನಾಡಿಲ್ಲ, ಸೌಹಾರ್ದಯುತವಾಗಿ ಸಭೆ ಮಾಡಿದ್ದೇವೆ. ಮೋದಿಯವರು ಮತ್ತೆ ಪ್ರಧಾನಿಯಾಗಬೇಕೆಂಬ ಉದ್ದೇಶದಿಂದ ಸಭೆ ಮಾಡಿದ್ದೇವೆ ಎಂದು ಹಳೆ ಪ್ಲೇಕಾರ್ಡ್ ಅನ್ನೇ ಪ್ಲೇ ಮಾಡಿದರು.
ಯಡಿಯೂರಪ್ಪ ಅವರ ಮೇಲಿನ ಮುನಿಸು ಎಲ್ಲಾ ಮುಗಿದುಹೋಗಿದೆ. ಮೇಲಿನವರು ಏನು ತೀರ್ಮಾನ ಮಾಡುತ್ತಾರೋ ಅವರೇ ತುಮಕೂರು ಅಭ್ಯರ್ಥಿಯಾಗಲಿದ್ದಾರೆ, ಜಗಳವೆಲ್ಲಾ ಸರಿಯಾಗಿದೆ. ಕ್ಷೇತ್ರವನ್ನು ಜನತಾದಳಕ್ಕೆ ನೀಡಬೇಕಾ ಅಥವಾ ನಮಗೆ ಇರುತ್ತದೆಯಾ ಎನ್ನುವುದರ ಕುರಿತು ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.