Rameshwar Cafe Blast Case: ರಾಮೇಶ್ವರ ಕಫೆ ಸ್ಪೋಟ ಪ್ರಕರಣ: ಆರೋಪಿ ಪತ್ತೆಗೆ ತನಿಖೆ ಚುರುಕು: ಸಿಎಂ ಸಿದ್ದರಾಮಯ್ಯ

ಮೈಸೂರು, ಮಾರ್ಚ್ 07: ಸ್ಫೋಟಕ ಇಟ್ಟು ಹೋಗಿದ್ದ ಆರೋಪಿಯ ಪತ್ತೆ ಹಚ್ಚುವ ಕಾರ್ಯ ಚುರುಕಾಗಿ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದರು.

ಸ್ಫೋಟವಾಗಿರುವುದು ನಿಜ. ಆರೋಪಿ ಮಾಸ್ಕ್ ಮತ್ತು ಟೋಪಿ ಧರಿಸಿ ಬಸ್ಸಿನಲ್ಲಿ ಬಂದು ತಿಂಡಿ ತಿಂದು ನಂತರ ಸ್ಫೋಟಕವುಳ್ಳ ಬ್ಯಾಗ್ ಇಟ್ಟು ತೆರಳಿದ್ದಾನೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಪಮುಖ್ಯಮಂತ್ರಿ , ಗೃಹ ಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇಂದು ನಾನೂ ಕೂಡ ಸ್ಥಳಕ್ಕೆ ತೆರಳಲಿದ್ದೇನೆ ಎಂದರು.

ಮಂಗಳೂರು ಕುಕ್ಕರ್ ಬಾಂಬ್ ಹಾಗೂ ಈ ಸ್ಫೋಟಕ್ಕೂ ಸಾಮ್ಯತೆ ಇರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ತನಿಖೆ ನಡೆಯುತ್ತಿದೆ ಎಂದರು.

ರಾಜಕೀಯ ಹೇಳಿಕೆ
ಅಲ್ಪಸಂಖ್ಯಾತರ ತುಷ್ಟೀಕರಣದಿಂದಾಗಿ ಈ ರೀತಿಯ ಘಟನೆಗಳು ನಡೆಯುತ್ತಿವೆ ಎಂದು ಬಿಜೆಪಿ ನಾಯಕರು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ರಾಜಕೀಯವಾದ ಹೇಳಿಕೆ ನೀಡಿದ್ದಾರೆ. ಅವರ ಕಾಲದಲ್ಲಿಯೂ ಬಾಂಬ್ ಸ್ಪೋಟವಾಗಿದೆ. ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟವಾದಾಗ ಏನು ಮಾಡಿದ್ದರು? ಆಗಲೂ ತುಷ್ಟೀಕರಣದಿಂದಾಗಿ ಆಗಿತ್ತೇ ಎಂದು ಪ್ರಶ್ನಿಸಿದರು.

ತನಿಖೆ ನಡೆಯುತ್ತಿದೆ
ಸ್ಪೋಟದ ಘಟನೆಯನ್ನು ನಾನು ಖಂಡಿಸುತ್ತೇನೆ. ಇದರಲ್ಲಿ ರಾಜಕಾರಣ ಮಾಡಬಾರದು ಎಂದರು. ಭಯೋತ್ಪಾದಕ ಕೃತ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿ ತನಿಖೆ ಇನ್ನೂ ನಡೆಯುತ್ತಿದೆ ಎಂದರು.

ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ
ವಿಧಾನ ಸೌಧದ ಪ್ರಕರಣ ಕುರಿತು ಎಫ್.ಎಸ್.ಎಲ್ ವರದಿಯನ್ನು ಸರ್ಕಾರ ಬಹಿರಂಗ ಮಾಡುತ್ತಿಲ್ಲ. ಸತ್ಯವನ್ನು ತಿರುಚುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿರುವ ಬಗ್ಗೆ ಮಾತನಾಡಿ, ಇಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು. ತಪ್ಪಿತಸ್ಥರನ್ನು ಶಿಕ್ಷಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿಯೇ ತೀರುತ್ತದೆ ಎಂದರು.

More News

You cannot copy content of this page