ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕಸಭಾ ಚುನಾವಣೆ ಸೋಲಿನ ಭೀತಿ ಕಾಡುತ್ತಿದೆ. ಆದ್ದರಿಂದ ನಲವತ್ತು ಶಾಸಕರಿಗೆ 50 ಕೋಟಿ ರೂಪಾಯಿ ಆಫರ್ ಕೊಟ್ಟಿದ್ದಾರೆಂದು ಹೇಳುತ್ತಿದ್ದಾರೆ, ಆದರೆ ನಾವು ಯಾರನ್ನೂ ಸಂಪರ್ಕ ಮಾಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುದಾನ ಸಿಕ್ಕಿಲ್ಲ ಅಂತ ಕಾಂಗ್ರೆಸ್ ಶಾಸಕರು ಅಸಮಾಧಾನ ವ್ಯಕ್ತಪಡಿಸಿರುವುದು ನಿಜ, ಚುನಾವಣಾ ವಾತಾವರಣ ನಮ್ಮ ಪರ ಇದೆ, ಹೀಗಾಗಿ ಇಂತಹ ಹೇಳಿಕೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ ಬಾರಿ ಬಿ ಎಸ್ ಯಡಿಯೂರಪ್ಪ ಅವರು ಕೂಡ 17 ಶಾಸಕರ ಆಪರೇಷನ್ ಕಮಲ ಮಾಡಿದಾಗರೂ ಇದೇ ಮಾತನ್ನು ಹೇಳಿದ್ದರು. ಆದರೆ, ಆಪರೇಷನ್ ಆದ ಬಳಿಕವೇ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಬಿದ್ದುಹೋಗಿತ್ತು.
ಲೋಕಸಭಾ ಚುನಾವಣೆ ಬಳಿಕ ಏನಾಗುತ್ತೆ ಎಂದು ಹೇಳಿಲ್ಲ, ಆದ್ರೆ ಮೈತ್ರಿ ಪಕ್ಷಗಳ ಗುರಿ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲೋದಾಗಿದೆ ಎಂದರು. ಹಾಗೆಯೇ ಗ್ಯಾರಂಟಿಗಳ ಡ್ಯಾಮೇಜ್ ಸರಿಪಡಿಸಲು ಈ ಥರ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಬಾಂಬ್ ಸ್ಫೋಟ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡುವುದಿಲ್ಲ. ಒಂದು ಜವಾಬ್ದಾರಿಯುತ ವಿಪಕ್ಷವಾಗಿ ರಾಜ್ಯ ಸರಕಾರಕ್ಕೆ ಸಂಪೂರ್ಣ ಸಹಕಾರ ಕೊಡಲಿದ್ದೇವೆ ಎಂದjg.
ರಾಜ್ಯದ ಜನರಲ್ಲೂ ಆತಂಕ..
ರಾಜ್ಯದ ಜನರಲ್ಲೂ ಆತಂಕ ಕಾಡುತ್ತಿದೆ. ಇಂಥ ಘಟನೆಗಳನ್ನು ಎಷ್ಟು ಗಂಭೀರವಾಗಿ ರಾಜ್ಯ ಸರಕಾರ ತೆಗೆದುಕೊಳ್ಳಬೇಕೋ, ಇಂಥ ಘಟನೆ ನಡೆದಾಗ ಪೊಲೀಸ್ ಅಧಿಕಾರಿಗಳು ಎಷ್ಟು ಗಂಭೀರವಾಗಿ ವರ್ತಿಸಬೇಕೋ ಅಂಥ ಗಂಭೀರತೆ ಮೇಲ್ನೋಟಕ್ಕೆ ಕಾಣುತ್ತಿಲ್ಲ ಎಂದು ಅವರು ಆಕ್ಷೇಪಿಸಿದರು. ಪಾಕಿಸ್ತಾನ ಜಿಂದಾಬಾದ್ ಘಟನೆ ಕುರಿತು ನಿರ್ಧರಿಸಲು 5 ದಿನ ಬೇಕೇ? ಇದು ನಾಚಿಕೆಗೇಡಿನ ಸಂಗತಿ ಅಲ್ಲವೇ ಎಂದು ಮರುಪ್ರಶ್ನೆ ಹಾಕಿದರು.
ಹಾದಿಬೀದಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿದ್ದಲ್ಲ. ವಿಧಾನಸೌಧದಲ್ಲಿ ಕೂಗಿರುವಾಗ ದೇಶದ್ರೋಹಿಗಳನ್ನು ಬಂಧಿಸಿಲ್ಲವೆಂದರೆ ನಿಮ್ಮ ಇಚ್ಛಾಶಕ್ತಿ ಕೊರತೆಯೇ? ಅಥವಾ ದೇಶದ್ರೋಹಿಗಳನ್ನು ರಕ್ಷಿಸುವ ಪ್ರಯತ್ನದ ಜೊತೆಗೆ, ಅಲ್ಪಸಂಖ್ಯಾತರ ಭಾವನೆಗೆ ಧಕ್ಕೆ ಆಗುವುದೆಂಬ ಭಯ ನಿಮ್ಮನ್ನು ಕಾಡುತ್ತಿದೆಯೇ; ಅದನ್ನು ಸ್ಪಷ್ಟವಾಗಿ ಹೇಳುವಂತೆ ಆಗ್ರಹಿಸಿದರು.