ಬೆಂಗಳೂರು : ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಮಂತ್ರಿ ಮತ್ತು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿದೆ. ಇದರಲ್ಲಿ ಸ್ಪಷ್ಟವಾಗಿ 2.5 ಮಿಲಿಯನ್ ಡಾಲರ್ ಹಣ ಕೊಟ್ಟಿಲ್ಲ ಅಂದರೆ, ರಾಮೇಶ್ವರಂ ಕೆಫೆ ರೀತಿಯಲ್ಲೇ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ.
ಇದರಿಂದ ನಗರ ಪೊಲೀಸರು ಅಲರ್ಟ್ ಆಗಿದ್ದು, ಸಿಸಿಬಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. [email protected] ಎನ್ನುವ ಮೇಲ್ ಐಡಿಯಿಂದ ಈ ಬೆದರಿಕೆ ಇ ಮೇಲ್ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇ-ಮೇಲ್ ನಲ್ಲಿ ಸ್ಪಷ್ಟವಾಗಿ ಈ ರೀತಿ ಬರೆದುಕೊಂಡಿದ್ದಾರೆ. ರಾಮೇಶ್ವರಂ ಕೆಫೆ ಸ್ಫೋಟ ಬರೀ ಟ್ರೈಲರ್..? ನಮಗೆ ನೀವು 2.5 ಮಿಲಿಯನ್ ಡಾಲರ್ ನೀಡದಿದ್ದರೆ, ಕರ್ನಾಟಕದಾದ್ಯಂತ ಬಸ್ಸುಗಳು, ರೈಲುಗಳು, ದೇವಸ್ಥಾನಗಳು, ಹೋಟೆಲ್ ಗಳಲ್ಲಿ ಬಾಂಬ್ ಸ್ಫೋಟಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ಮಾರ್ಚ್ 1ರಂದು ಬೆಂಗಳೂರಿನ ಹೆಚ್ ಎಎಲ್ ಸಮೀಪದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಮಾಡಲಾಗಿತ್ತು. ನಾಲ್ಕು ದಿನ ಕಳೆದರೂ ಯಾವುದೇ ವ್ಯಕ್ತಿಯನ್ನು ಬಂಧಿಸಲಾಗಿಲ್ಲ, ಎನ್ ಐ ಎ ಅಧಿಕಾರಿಗಳು, ಸಿಸಿಬಿ ಪೊಲೀಸರು ಶಂಕಿತ ಉಗ್ರನ ಬಂಧನಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದಾರೆ. ಇದರ ನಡುವೆ ಇ ಮೇಲ್ ಬೆದರಿಕೆ ಮತ್ತಷ್ಟು ಆತಂಕವನ್ನುಂಟು ಮಾಡಿದೆ.